ಗುರುವಾರಕ್ಕೂ ಪುನೀತ್ ಸಿನಿಮಾ ರಿಲೀಸಿಗೂ ಏನದು ನಂಟು?

ಬೆಂಗಳೂರು: ಅತೀ ನಿರೀಕ್ಷಿತ ಪುನೀತ್ ರಾಜ್‍ಕುಮಾರ್ ನಟನೆಯ `ಜೇಮ್ಸ್’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ರಾಜ್ಯಾದ್ಯಂತ 400ಕ್ಕೂ ಹೆಚ್ಚು ಪರದೆಗಳಲ್ಲಿ ರಾರಾಜಿಸುತ್ತಿದೆ. ಅಪ್ಪು ಅಭಿಮಾನಿಗಳು ನೆಚ್ಚಿನ ನಟನನ್ನು ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಶಿಳ್ಳೆ, ಚಪ್ಪಾಳೆ, ಕಟೌಟ್‍ಗಳಿಗೆ ಅಭಿಷೇಕ ಮಾಡುವುದರ ಮೂಲಕ ಅಭಿಮಾನ ತೋರುತ್ತಿದ್ದಾರೆ. ಅಪ್ಪು ಸಿನಿಮಾಗಳು ಬಂದರೆ, ಆ ಗುರುವಾರ ಹೀಗೆಯೇ ಇರುತ್ತದೆ. ಹೌದು, ಗುರುವಾರಕ್ಕೂ ಅಪ್ಪು ಸಿನಿಮಾಗಳ ಬಿಡುಗಡೆಗೂ ಒಂದು ನಂಟಿದೆ. ಪುನೀತ್ ರಾಜ್ ಕುಮಾರ್ ಮತ್ತು ಡಾ.ರಾಜ್ ಕುಟುಂಬದ ನಿರ್ಮಾಣದಲ್ಲಿ ತಯಾರಾದ ಬಹುತೇಕ ಚಿತ್ರಗಳು ಗುರುವಾರದಂದೇ ತೆರೆ ಕಾಣುವುದು ವಿಶೇಷ.

ಹೌದು…. ಅಪ್ಪು ಅವರ ಅಭಿ(ಏ.3) ಸಿನಿಮಾದ ನಂತರ ಇತ್ತೀಚಿನ ನಟಸಾರ್ವಭೌಮ (ಫೆಬ್ರವರಿ 7- ಗುರುವಾರ), ಪರಮಾತ್ಮ (ಅಕ್ಟೋಬರ್ 6 ಗುರುವಾರ), ದೊಡ್ಮನೆ ಹುಡುಗ (ಸೆಪ್ಟಂಬರ್ 30 ಗುರುವಾರ) ಹಾಗೂ ಯುವರತ್ನ (ಏಪ್ರಿಲ್ 1, ಗುರುವಾರ) ಹೀಗೇ ಅವರ ಅನೇಕ ಸಿನಿಮಾಗಳು ಗುರುವಾರವೇ ರಿಲೀಸ್ ಆಗಿವೆ. ಈ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಸ್ಯಾಂಡಲ್‍ವುಡ್‍ನಲ್ಲಿ ದಾಖಲೆಯನ್ನೂ ಮಾಡಿವೆ.

`ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ ಸ್ಮರಣೆ ಮಾತ್ರದಲ್ಲಿ ಕ್ಲೇಶ ಕಳೆದು ಸದ್ಗತಿಯ ಕರುಣಿಸುವನಮ್ಮ’ ಎಂಬ ಗೀತೆಯನ್ನು ಹಾಡಿದ್ದ ಅಣ್ಣಾವ್ರ ಸಿನಿಮಾಗಳೂ ಕೂಡ ಬಹುತೇಕ ಗುರುವಾರವೇ ರಿಲೀಸ್ ಆಗಿದ್ದು ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡಿವೆ. ಆದರೆ, ಈ ಬಾರಿ ಕಾಕತಾಳೀಯವೆಂಬಂತೆ ನಟ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬವೂ ಗುರುವಾರವೇ ಬಂದಿದ್ದು, ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ `ಜೇಮ್ಸ್’ ಚಲನಚಿತ್ರವೂ ಗುರುವಾರವೇ ರಿಲೀಸ್ ಆಗಿದೆ. ಇದು ಅಭಿಮಾನಿಗಳಲ್ಲಿ ಸಂತೋಷ ಹಾಗೂ ಅಪ್ಪು ನೆನಪಿಸುವ ದು:ಖದ ದಿನವೂ ಆಗಿದೆ. ಇದನ್ನೂ ಓದಿ: ದುಡ್ಡು ಸಂಪಾದನೆ ಮಾಡಬಹುದು, ಪ್ರೀತಿ ಸಂಪಾದನೆ ಮಾಡೋದು ಕಷ್ಟ: ಅಪ್ಪು ಅಭಿಮಾನಿ

ಗುರುವಾರದ ಬಗ್ಗೆ ಅಪ್ಪು ಹೇಳಿದ್ದೇನೆ?
ಯುವರತ್ನ ಸಿನಿಮಾ ರಿಲೀಸ್ ವೇಳೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದು ಅಪ್ಪು, `ಮಂತ್ರಾಲಯದ ಗುರುರಾಯರು ನಮ್ಮ ಮನೆ- ಮನಸ್ಸಿಗೆ ತುಂಬಾ ಹತ್ತಿರ. ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ’ ಎಂದು ಅವರು ತಿಳಿಸಿಕೊಟ್ಟಿದ್ದಾರೆ. ಹಾಗಾಗಿ ಬಹುತೇಕ ಗುರುವಾರವೇ ಸಿನಿಮಾಗಳು ರಿಲೀಸ್ ಆಗುತ್ತವೆ. ಅದನ್ನು ಸಕ್ಸಸ್ ಮಾಡುವುದು ಅಭಿಮಾನಿ ದೇವರುಗಳು ಇಚ್ಚೆ ಎಂದು ಹೇಳಿದ್ದರು. ಇದನ್ನೂ ಓದಿ: ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಶೀಘ್ರವೇ ದಿನಾಂಕ ನಿಗದಿ: ಬೊಮ್ಮಾಯಿ

ಗುರುವಾರ ವಿಶೇಷತೆಯೇನು?
ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ. ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನವೂ ಪಠಿಸಲು ಆಗಲಿಲ್ಲ ಅಂದರೆ ರಾಯರ ವಿಶೇಷ ದಿನವಾದ ಗುರುವಾರ ಪಠಿಸಬಹುದು. ಇಲ್ಲ ಶುಕ್ಲ ಪಕ್ಷ ದಿನಗಳಲ್ಲಿ ಪಠಿಸುವುದರಿಂದ ಒಳಿತು ಆಗುತ್ತದೆ ಎಂಬ ನಂಬಿಕೆ ಇದೆ. ಗುರುವಾರದಂದು ಶ್ರೀ ರಾಘವೇಂದ್ರ ಸ್ವಾಮಿಯನ್ನು ಪೂಜಿಸುವುದರಿಂದ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯು ಪ್ರಾಪ್ತವಾಗುತ್ತದೆ. ಈ ದಿನ ಪೂಜೆ ವೇಳೆ ಮಂತ್ರ ಜಪಿಸಿದರೆ ಶುಭ ಆಗಲಿದೆ ಎನ್ನುವ ನಂಬಿಕೆ.

Comments

Leave a Reply

Your email address will not be published. Required fields are marked *