ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

ದುಬೈ: ಕೆಂಪು ಸಮುದ್ರದ (Red Sea) ಮೂಲಕ ಹಾದುಹೋಗುವ ಫೈಬರ್‌ ಕೇಬಲ್‌ (Fibre Cable) ತುಂಡಾಗಿದ್ದು ವಿಶ್ವಾದ್ಯಂತ ಇಂಟರ್‌ನೆಟ್‌ (Internet) ಬಳಕೆಯಲ್ಲಿ ಸಮಸ್ಯೆಯಾಗಿದೆ.

ಕೇಬಲ್ ವ್ಯವಸ್ಥೆಗೆ ಹಾನಿಯಾಗಿರವ ಕಾರಣ ಭಾರತ, ಪಾಕಿಸ್ತಾನ ಮತ್ತು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಬಳಕೆದಾರರು ಅಡಚಣೆಗಳನ್ನು ಎದುರಿಸಿದ್ದಾರೆ ಎಂದು ಇಂಟರ್ನೆಟ್ ಸಂಪರ್ಕದ ಮೇಲೆ ಕಣ್ಣಾ ವಲು ಇಡುವ ನೆಟ್‌ಬ್ಲಾಕ್ಸ್ ಹೇಳಿದೆ.

ಸಂಸ್ಥೆಯು ಸೌದಿ ಅರೇಬಿಯಾದ (Saudi arabia) ಜೆಡ್ಡಾ ಸಮೀಪ SMW4 ಮತ್ತು IMEWE ಕೇಬಲ್ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.

ಭಾರತದ ಟಾಟಾ ಕಮ್ಯುನಿಕೇಷನ್ಸ್ ಆಗ್ನೇಯ ಏಷ್ಯಾ-ಮಧ್ಯಪ್ರಾಚ್ಯ-ಪಶ್ಚಿಮ ಯುರೋಪ್ 4 (SMW4) ನಿರ್ವಹಣೆ ಮಾಡಿದರೆ, ಅಲ್ಕಾಟೆಲ್-ಲ್ಯೂಸೆಂಟ್ ನೇತೃತ್ವದ ಒಕ್ಕೂಟ ಭಾರತ-ಮಧ್ಯಪ್ರಾಚ್ಯ-ಪಶ್ಚಿಮ ಯುರೋಪ್ (IMEWE) ಕೇಬಲ್‌ ನಿರ್ವಹಿಸುತ್ತಿದೆ. ಇದನ್ನೂ ಓದಿ: ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ

ಫೈಬರ್‌ ಕೇಬಲ್‌ಗಳು ತುಂಡಾಗಿದ್ದು ಹೇಗೆ ಎನ್ನುವುದಕ್ಕೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ನೈಸರ್ಗಿಕ ಘಟನೆಗಳು, ಅಪರೂಪದ ಸಂದರ್ಭಗಳಲ್ಲಿ ಉದ್ದೇಶಕ ಕೃತ್ಯದಿಂದ ಕೇಬಲ್‌ ತುಂಡಾಗುತ್ತದೆ. ಕೆಲವೊಮ್ಮೆ ಆಂಕರ್‌ ಡ್ರ್ಯಾಗ್‌ನಿಂದಲೂ ತುಂಡಾಗುವ ಸಾಧ್ಯತೆ ಇರುತ್ತದೆ. ಹಡಗು ಲಂಗರು ಹಾಕುವಾಗ ಭಾರವಾದ ಲೋಹದ ಸರಪಳಿ ಇರುವ ಆಂಕರ್‌ ಅನ್ನು ಸಮುದ್ರಕ್ಕೆ ಬೀಳಿಸಲಾಗುತ್ತದೆ. ಒಂದು ವೇಳೆ ಸರಿಯಾಗಿ ನೆಲವನ್ನು ಹಿಡಿದಿಟ್ಟುಕೊಳ್ಳದೇ ಇದ್ದರೆ ಹಡಗು ಚಲಿಸಿದಾಗ ಆಂಕರ್‌ ಚಲಿಸುವ ಸಾಧ್ಯತೆ ಇರುತ್ತದೆ. ಚಲಿಸಿದಾಗ ಸಮುದ್ರದ ಆಳದಲ್ಲಿ ಹಾಕಿರುವ ಆಂಕರ್‌ಗೆ ಸಿಕ್ಕಿ ಕೇಬಲ್‌ ತುಂಡಾಗುವ ಸಾಧ್ಯತೆಯಿದೆ.

ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ಮಾಡುತ್ತಿರುವ ದಾಳಿಯನ್ನು ನಿಲ್ಲಿಸದೇ ಇದ್ದರೆ ಸಮುದ್ರದಲ್ಲಿ ಹೋಗಿರುವ ಕೇಬಲ್‌ ಕತ್ತರಿಸುತ್ತೇವೆ ಎಂದು ಯೆಮನ್‌ನ ಹೌತಿ ಬಂಡುಕೋರರು ಎಚ್ಚರಿಕೆ ನೀಡಿದ್ದರು. ಈ ಬಾರಿಯ ಕೃತ್ಯದಲ್ಲಿ ಹೌತಿ ಬಂಡುಕೋರರ ಕೈವಾಡ ಇರುವ ಶಂಕೆ ಈಗ ವ್ಯಕ್ತವಾಗುತ್ತಿದೆ.

ಕೆಂಪು ಸಮುದ್ರ ಮಾರ್ಗ ಎಲ್ಲಿದೆ?
ಯುರೋಪ್‌ ಮತ್ತು ಏಷ್ಯಾದ ವ್ಯಾಪಾರದ ಕೊಂಡಿಯೇ ಕೆಂಪು ಸಮುದ್ರ ಮಾರ್ಗ. ಯುರೋಪ್‌ನಿಂದ ಮೆಡಿಟರೆನಿಯನ್‌ ಸಮುದ್ರದ ಮೂಲಕ ಬರುವ ಹಡಗುಗಳು ಸೂಯೆಜ್‌ ಕಾಲುವೆ ಮೂಲಕ ಕೆಂಪು ಸಮುದ್ರಕ್ಕೆ ಆಗಮಿಸಿ ಯೆಮನ್‌ ಬಳಿ ಬಾಬ್‌ ಎಲ್‌ ಮಂಡೇಬ್‌ ಚೋಕ್‌ ಪಾಯಿಂಟ್‌ ಮೂಲಕ ಅರಬ್ಬಿ ಸಮುದ್ರಕ್ಕೆ ಬಂದು ಏಷ್ಯಾದ ದೇಶಗಳಿಗೆ ಹೋಗುತ್ತದೆ. ಪ್ರತಿ ದಿವಸ ಈ ಮಾರ್ಗದಲ್ಲಿ ಅಂದಾಜು 385 ಕಾರ್ಗೋ ಹಡಗುಗಳು ಸಂಚರಿಸುತ್ತವೆ.