ವಾಯುಭಾರ ಕುಸಿತದ ಎಫೆಕ್ಟ್; ತಮಿಳುನಾಡಿನಾದ್ಯಂತ ಭಾರೀ ಮಳೆ, ಪ್ರವಾಹ ಮುನ್ಸೂಚನೆ!

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕಳೆದ 2-3 ದಿನಗಳಿಂದ ತಮಿಳುನಾಡಿನ (TamilNadu) ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೆಲ ಜಿಲ್ಲೆಗಳಿಗೆ ಇಂದು ರೆಡ್‌ ಮತ್ತು ಯೆಲ್ಲೋ ಅಲರ್ಟ್‌ (Red And Yellow Alert) ಘೋಷಣೆ ಮಾಡಲಾಗಿದೆ. ಈ ನಡುವೆ ಕೆಲ ಜಿಲ್ಲೆಗಳಿಗೆ ಪ್ರವಾಹ ಮುನ್ಸೂಚನೆಯನ್ನೂ ನೀಡಲಾಗಿದ್ದು, ರಕ್ಷಣಾ ಸಿಬ್ಬಂದಿ ನಿಗಾ ವಹಿಸಿದ್ದಾರೆ.

ತಂಜಾವೂರು, ತಿರುವರೂರು, ನಾಗಪಟ್ಟಣಂ ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ. ಇದನ್ನೂ ಓದಿ: ಬೆಂಗಳೂರು| ಗಂಡನನ್ನು ಬಿಟ್ಟು ತನ್ನ ಜೊತೆ ಇರುವಂತೆ ಒತ್ತಾಯ – ಒಪ್ಪದಿದ್ದಕ್ಕೆ ವಿವಾಹಿತ ಮಹಿಳೆ ಕೊಂದು ಪ್ರಿಯಕರ ಆತ್ಮಹತ್ಯೆ

ಮಳೆಯ ಅಬ್ಬರದಿಂದಾಗಿ (Heavy Rains) ತೂತುಕುಡಿಯಲ್ಲಿ ಥಾಮಿರಬರಣಿ ನದಿಯಲ್ಲಿ ಉಬ್ಬರವಿಳಿತ ಹೆಚ್ಚಾಗುತ್ತಿದ್ದು, ಶ್ರೀವೈಕುಂಟಂ ಮತ್ತು ಎರಲ್‌ಗೆ ಪ್ರವಾಹ ಮುನ್ಸೂಚನೆ ನೀಡಲಾಗಿದೆ. ಮತ್ತೊಂದೆಡೆ ಚೆನ್ನೈನಲ್ಲಿ ಪೂಂಡಿ ಅಣೆಕಟ್ಟಿನಿಂದ ಇದ್ದಕ್ಕಿದ್ದಂತೆ 12,000 ಕ್ಯುಸೆಕ್‌ ಹೆಚ್ಚುವರಿ ನೀರು ಹರಿಸಲಾಗುತ್ತಿದ್ದು, ಇದರಿಂದ ಜಲಾಶಯಗಳ ಸಮೀಪವಿರುವ ರೆಡ್‌ಹಿಲ್ಸ್ ಮತ್ತು ಚೆಂಬರಂಬಾಕ್ಕಂ ಪ್ರದೇಶಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ತಿರುನಲ್ವೇಲಿ ಮತ್ತು ತೆಂಕಶಿಯಲ್ಲಿ ಮಳೆ ಹಾನಿ ಮುಂದುವರಿದಿದೆ.

ಕಳೆದ 24 ಗಂಟೆಯಲ್ಲಿ ರಾಮನಾಥಪುರಂ ಜಿಲ್ಲೆಯ ತೊಂಡಿ ಮತ್ತು ತಿರುವಡನೈ ಜಿಲ್ಲೆಗಳಲ್ಲಿ ಕ್ರಮವಾಗಿ 5 ಮತ್ತು 4 ಸೆಂ.ಮೀ. ಮಳೆಯಾಗಿದೆ. ಮಧುರೈ, ದಿಂಡಿಗಲ್ ಮತ್ತು ಥೇಣಿ ಭಾಗಗಳಲ್ಲಿ 1 ರಿಂದ 2 ಸೆಂ.ಮೀ. ಮಳೆಯಾಗಿದೆ. ತಂಜಾವೂರಿನ ಮಂಜಲಾರಿನಲ್ಲಿ 6.1 ಸೆಂ.ಮೀ ನಷ್ಟು ಮಳೆಯ ಪ್ರಮಾಣ ದಾಖಲಾಗಿದೆ. ಇನ್ನೂ ಕಂಡಿಯೂರು ಮತ್ತು ಸಾತನೂರು ಸೇರಿದಂತೆ ಇತರ ಪ್ರದೇಶಗಳಲ್ಲಿ ಮನೆ ಗೋಡೆಗಳು ಕುಸಿದಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ. ಇದನ್ನೂ ಓದಿ: `ಒಂದು ದೇಶ ಒಂದು ಚುನಾವಣೆ’, ಪ್ರಧಾನಿ ಮೋದಿಯವರ ದಿಟ್ಟ ನಿರ್ಧಾರ: ಬೊಮ್ಮಾಯಿ

ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ನಾಗಪಟ್ಟಿಣಂ, ತಿರುವರೂರು, ತಂಜಾವೂರು, ಪುದುಕೊಟ್ಟೈ, ಶಿವಗಂಗಾ, ರಾಮನಾಥಪುರಂ, ಮಧುರೈ, ಥೇಣಿ, ವಿರುಧುನಗರ ಸೇರಿದಂತೆ ಹಲವು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: `ಒಂದು ದೇಶ ಒಂದು ಚುನಾವಣೆ’ – ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಬಿಜೆಪಿ ಪ್ಲ್ಯಾನ್‌ – ಡಿಕೆಶಿ