ಬಂಡೀಪುರ ಬೆಂಕಿ ಪ್ರಕರಣ – ಫೈರ್‌ಲೈನ್‌ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಒಂದು ವರದಿ ಸಲ್ಲಿಕೆಯಾಗಿದೆ. ಫೈರ್‌ಲೈನ್‌ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಬಿದ್ದ ಪರಿಣಾಮ 4419.54 ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಅರಣ್ಯಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಹರಿಕುಮಾರ್ ಝಾ ನೇತೃತ್ವದಲ್ಲಿ ಒಂದು ವಿಚಕ್ಷಣಾ ಸಮಿತಿ ನೇಮಿಸಲಾಗಿತ್ತು.

ಈ ವಿಚಕ್ಷಣಾ ಸಮಿತಿ ಇದೀಗ ಸರ್ಕಾರಕ್ಕೆ ಒಂದು ವರದಿ ಸಲ್ಲಿಕೆ ಮಾಡಿದೆ. ಅಂದಿನ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾದವನ್, ಹುಲಿ ಯೋಜನೆ ಎಪಿಸಿಸಿಎಫ್ ಜಗತ್ ರಾಮ್ ಅವರ ಕರ್ತವ್ಯ ಲೋಪದ ಬಗ್ಗೆ ತನಿಖಾ ವರದಿ ಬೊಟ್ಟು ಮಾಡಿದೆ.

ನಿಗದಿತ ಪ್ರಮಾಣದಲ್ಲಿ ಫೈರ್ ಲೈನ್ ಮತ್ತು ವಿವ್ ಲೈನ್ ನಿರ್ಮಿಸದೆ ಕರ್ತವ್ಯ ಲೋಪದ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದು ನೌಕರರ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯತೆ, ಅಧಿಕಾರಿಗಳ ಕರ್ತವ್ಯ ಲೋಪವೇ ಬೆಂಕಿ ಹರಡಲು ಪ್ರಮುಖ ಕಾರಣ ಎನ್ನುವ ಅಂಶಗಳು ಕಂಡು ಬಂದಿದೆ.

ಮತ್ತೆ ಕಾಮಗಾರಿ ನಡೆಸದೆ ಬಿಲ್ ಪಾಸ್ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರ್ಕಾರಕ್ಕೆ ನಷ್ಟವಾಗಿರುವ ಹಣವನ್ನು ಅಧಿಕಾರಿಗಳ ನಿವೃತ್ತಿ ವೇತನದಿಂದ ಭರಿಸುವಂತೆ ಶಿಫಾರಸ್ಸು ಮಾಡಿದ್ದು ಈ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತಾರಾ ಎನ್ನುವುದೇ ಪ್ರಶ್ನೆಯಾಗಿದೆ.

Comments

Leave a Reply

Your email address will not be published. Required fields are marked *