– ಜಲಪ್ರಳಯಕ್ಕೆ `ಸೋಮಾಲಿ ಜೆಟ್’ ಕಾರಣ, ಏನಿದು ಸೋಮಾಲಿ ಜೆಟ್?
ಬೆಂಗಳೂರು: ಮಹಾಮಳೆಯಿಂದ ಪ್ರವಾಹ, ಗುಡ್ಡ ಕುಸಿತವಾಗಿ ಹಲವರ ಸಂಕಷ್ಟಕ್ಕೆ ಕಾರಣವಾಗಿದ್ದ ಮಹಾ ಜಲಪ್ರಳಯಕ್ಕೆ `ಸೋಮಾಲಿ ಜೆಟ್’ ಚಂಡಮಾರುತ ಕಾರಣ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಏನಿದು ಸೋಮಾಲಿ ಜೆಟ್?
ಅಫ್ರಿಕಾ ಬಳಿಯ ಮಡಗಾಸ್ಕರ್ ಬಳಿಯ ದ್ವೀಪದ ಬಳಿ ಎದ್ದ ಚಂಡಮಾರುತವನ್ನು ಸೋಮಾಲಿ ಜೆಟ್ ಎಂದು ಕರೆಯುತ್ತಾರೆ. ಈ ಚಂಡಮಾರುತ ಗಾಳಿಯ ಸಮೇತ ದಿಕ್ಕು ಬದಲಿಸಿ ಭಾರತದತ್ತ ಬೀಸಿದ ಕಾರಣ ಮಹಾಮಳೆಯಾಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ ಎನ್ನಲಾಗಿದೆ.

ಪಶ್ಚಿಮಘಟ್ಟ ಭಾಗಗಳಲ್ಲಿ ಮುಂಗಾರು ಈ ಬಾರಿ ತೀವ್ರಗೊಂಡಿದ್ದ ಕಾರಣ ವಾಯುಭಾರ ಕುಸಿತ ಸಂಭವಿಸಿತ್ತು. ಈ ವೇಳೆ ಸೋಮಾಲಿ ಜೆಟ್ ಚಂಡಮಾರುತ ಬಿರುಸು ಪಡೆದಿದ್ದ ಕಾರಣ ಹೆಚ್ಚಿನ ಮಳೆಯಾಗಿದೆ. ವಾಯುಭಾರ ಕುಸಿತದಿಂದ ಪಶ್ಚಿಮಘಟ್ಟದಲ್ಲಿ ತಡೆಯುಂಟಾಗಿ ಆಗಲೇ ಸುರಿಯುತ್ತಿದ್ದ ಮಳೆಗೆ ಮತ್ತಷ್ಟು ವೇಗ ಕೊಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿವರಿಸಿದೆ.
ಪಶ್ಚಿಮಘಟ್ಟ ಪ್ರದೇಶಕ್ಕೆ ಈ ಚಂಡಮಾರುತ ತಟ್ಟಿದ ಕಾರಣ ಅಪಾರ ನಷ್ಟ ಉಂಟಾಗಿದೆ. ಪ್ರಮುಖವಾಗಿ ಮಳೆಯಿಂದ ಗುಡ್ಡ ಕುಸಿತ ಹೆಚ್ಚಾಗಿದ್ದರಿಂದ ಹೆಚ್ಚಿನ ಹಾನಿಯಾಗಿದೆ. ಸದ್ಯ ಕೊಡಗು ಎಂದ ತಕ್ಷಣ ಎಲ್ಲರ ಕಣ್ಮುಂದೆ ಬರುತ್ತಿದ್ದ ಚಿತ್ರಣ ಜಲಪ್ರಳಯ. ಮಳೆ ನಿಂತರೂ ಗುಡ್ಡಗಳು ಇನ್ನೂ ಕುಸಿಯುತ್ತಲೇ ಇದ್ದು, ನಾಲ್ಕು ದಿನಗಳ ಕಾಲ ಅಕ್ಷರಶಃ ಜಲ ಪ್ರವಾಹದಲ್ಲಿ ಮುಳುಗಿದ್ದ ಮಡಿಕೇರಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಉಳಿದಂತೆ ದಕ್ಷಿಣಕನ್ನಡ, ಚಿಕ್ಕಮಗಳೂರು, ಹಾಸನ ಗಡಿಭಾಗಗಳಲ್ಲಿ ಭೂಕುಸಿತ ಭೀತಿ ಎದುರಾಗಿದೆ.
ಈ ನಡುವೆ ಮಡಿಕೇರಿಯಲ್ಲಿ ವರುಣನ ಆರ್ಭಟ ತಗ್ಗಿದ್ದು, ಪ್ರವಾಹ ಪೀಡಿತ ಗ್ರಾಮಗಳಲ್ಲಿ ತೆರವು ಕಾರ್ಯ ಚುರುಕುಗೊಂಡಿದೆ. ಇದೇ ಮೊದಲ ಬಾರಿ ರಕ್ಷಣಾ ಕಾರ್ಯಕ್ಕೆ ಡ್ರೋನ್ ಕ್ಯಾಮೆರಾ ಬಳಕೆ ಮಾಡಲಾಗಿದ್ದು, ಮಹಾಮಳೆಗೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply