ಈ ನಟ ರಾಜಕೀಯ ಬಂದರೆ ಕೈ ಜೋಡಿಸಲು ಸಿದ್ಧ: ನಟ ಕಮಲ್ ಹಾಸನ್

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬಂದರೆ ನಾನು ಅವರೊಂದಿಗೆ ಕೈ ಜೋಡಿಸಲು ಸಿದ್ಧ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.

ರಜನಿ ಮತ್ತು ನಾನು ಚಿತ್ರರಂಗದಲ್ಲಿ ಎದುರಾಳಿಗಾಗಿ ಕಂಡರೂ, ಪ್ರಮುಖ ವಿಚಾರಗಳ ಬಗ್ಗೆ ನಾವಿಬ್ಬರು ಚರ್ಚಿಸುತ್ತಿರುತ್ತೇವೆ. ಒಂದು ವೇಳೆ ರಜನಿ ರಾಜಕೀಯಕ್ಕೆ ಬರುವುದಾದರೆ ಅವರೊಂದಿಗೆ ರಾಜಕೀಯ ಕುರಿತು ಚರ್ಚೆ ನಡೆಸುವುದು ಕಷ್ಟವಾಗುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ತಮ್ಮ ಸ್ವಂತ ಪಕ್ಷ ಪ್ರಾರಂಭಕ್ಕೆ ದಿನಾಂಕ ನಿಗದಿಯಾಗಿದೆಯೇ ಎಂಬ ಪ್ರಶ್ನೆಗೆ ಇದೇ ಸಂದರ್ಭದಲ್ಲಿ ಉತ್ತರಿಸಿದ ಕಮಲ್ ಹಾಸನ್, ಅದಕ್ಕಾಗಿ ಆತುರಪಡದೆ ನಿರ್ಧಾರ ತೆಗೆದುಕೊಳ್ಳಬೇಕು ಅಂದ್ರು. ಅಲ್ಲದೆ ತಮ್ಮ ಪಕ್ಷವನ್ನು ಘೋಷಣೆ ಮಾಡಲು ನಿರ್ಧರಿಸಿದ ದಿನ ಕಾಕತಾಳೀಯವಾಗಿ ಒಂದು ಕ್ರಾಂತಿಯೂ ಆಗಬಹುದು ಎಂದು ಹೇಳಿದ್ರು.

ಕೆಲವು ತಿಂಗಳಿನಿಂದೀಚೆಗೆ ಕಮಲ್ ಹಾಸನ್ ತಮಿಳುನಾಡಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ರಾಜಕೀಯಕ್ಕೆ ಧುಮುಕುವ ಬಗ್ಗೆ ಸಾಕಷ್ಟು ಸುಳಿವು ನೀಡ್ತಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ಕಮಲ್ ಹಾಸನ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದರು. ತಮಿಳುನಾಡಿನ ರಾಜಕೀಯದ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾಗಿ ವರದಿಗಾರರಿಗೆ ತಿಳಿಸಿದ್ದರು.

ಯಾವುದಾದರೂ ಪಕ್ಷಕ್ಕೆ ಸೇರ್ಪಡೆಯಾಗ್ತೀರಾ ಎಂಬ ಪ್ರಶ್ನೆಗೆ, ಖಂಡಿತವಾಗಿಯೂ ನನ್ನ ಬಣ್ಣ ಕೇಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದರು.

Comments

Leave a Reply

Your email address will not be published. Required fields are marked *