ರೈತರ ಖಾತೆಗೆ 1 ರೂ. ಬೆಳೆ ಪರಿಹಾರ ಜಮೆ- 1 ಚಾಕ್ಲೆಟ್ ಕೂಡ ಬರಲ್ಲ ಎಂದು ಅನ್ನದಾತರ ಆಕ್ರೋಶ

ಧಾರವಾಡ/ಬಾಗಲಕೋಟೆ/ಮಂಡ್ಯ: ರೈತರಿಗೆ ಬೆಳೆ ಪರಿಹಾರವಾಗಿ ಸರ್ಕಾರ ಕೊಟ್ಟ ಹಣ ಎಷ್ಟು ಎಂದು ಕೇಳಿದ್ರೆ ನೀವು ನಗ್ತಿರ.

ಹೌದು. ಧಾರವಾಡದ ಹಾರೋ ಬೆಳವಡಿ ಗ್ರಾಮದ ಮೂರು ರೈತರಿಗೆ ಸರ್ಕಾರ ಬರಗಾಲದಿಂದ ಹಾನಿಯಾದ ಬೆಳೆಗೆ ಪರಿಹಾರ ಕೊಟ್ಟಿದ್ದು ಕೇವಲ 1 ರೂ. ಗ್ರಾಮದ ಸಂಗನಗೌಡ, ಮಾನಪ್ಪ ಹಾಗೂ ರುದ್ರಪ್ಪ ಎಂಬ ರೈತರ ಬ್ಯಾಂಕ್ ಅಕೌಂಟಿನಲ್ಲಿ ಒಂದು ರೂಪಾಯಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆ. ಇದರಿಂದ ದಂಗಾದ ರೈತರು, ಇದೇನು ಇಷ್ಟೇನಾ ಪರಿಹಾರ ಎಂದು ಬಾಯಿ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ.

ಇದೇ ಗ್ರಾಮದ ಕೆಲವರಿಗೆ 150, 200 ಹಾಗೂ 210 ರೂಪಾಯಿ ಪರಿಹಾರ ಸಿಕ್ಕಿದೆ. ಇದಕ್ಕೆ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ನಾಚಿಕೆಯಿಲ್ಲದೆ 1 ರೂ. ಪರಿಹಾರ ಕೊಟ್ಟಿದ್ದಾರೆ. ಇದರಲ್ಲಿ ಒಂದು ಚಾಕಲೇಟ್ ಕೂಡಾ ಬರಲ್ಲ ಎಂದಿದ್ದಾರೆ.

ಇದನ್ನೂ ಓದಿ: 5 ಏಟು ತಿಂದಿದ್ರೆ 500, 14 ಏಟು ತಿಂದವನಿಗೆ 1400 ರೂ: ಲಾಠಿ ಏಟು ತಿಂದಿದ್ದ ಯಮನೂರ ಗ್ರಾಮಸ್ಥರಿಗೆ ಸರ್ಕಾರದ ಪರಿಹಾರ

ಬಾಗಲಕೋಟೆಯಲ್ಲೂ ಇಂತಹದ್ದೇ ಘಟನೆ ನಡೆದಿದೆ. ಹುನಗುಂದ ತಾಲೂಕಿನಲ್ಲಿ ಸುಮಾರು 20 ರೈತರ ಖಾತೆಗೆ ಕಂದಾಯ ಇಲಾಖೆಯಿಂದ 1 ರೂ. ಜಮೆ ಆಗಿದೆ. ಹುನಗುಂದ ರೈತರ ಸಿಂಡಿಕೇಟ್ ಬ್ಯಾಂಕ್ ಖಾತೆಗೆ 1 ರೂ ಬೆಳೆ ಪರಿಹಾರ ಜಮೆಯಾಗಿದೆ. ಸುರೇಶ್ ಹುನ್ನುರು ಎಂಬ ರೈತ 20 ಎಕರೆ ಹೊಲದಲ್ಲಿ ಕಡಲೆ ಬೆಳೆ ಬೆಳೆದಿದ್ದರು. 20 ಎಕರೆ ಬೆಳೆ ನಷ್ಟ ಆದವರಿಗೆ ಸರ್ಕಾರದಿಂದ ಕೇವಲ 1 ರೂ ಪರಿಹಾರ ಸಿಕ್ಕಿದೆ. ಈ ಘಟನೆಯಿಂದ ರೈತರು ಆಶ್ಚರ್ಯಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *