IPL Final | ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಮದಗಜಗಳ ಗುದ್ದಾಟ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್‌

ಅಹಮದಾಬಾದ್‌: 18ನೇ ಆವೃತ್ತಿಯ ಐಪಿಎಲ್‌ ಆವೃತ್ತಿಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು ಪಂಜಾಬ್‌ ಕಿಂಗ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಫೈನಲ್‌ಪಂದ್ಯಕ್ಕೆ ಇಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಎರಡು ದಶಕಗಳಿಂದ ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್‌ಗೆ ವಿರಾಟ್‌ ಕೊಹ್ಲಿ (Virat Kohli) ಮತ್ತು ಶ್ರೇಯಸ್‌ ಅಯ್ಯರ್‌ (Shreyas Iyer) ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿ ಎದುರಾಗುತ್ತಿದ್ದಾರೆ. 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಕಾತರದಲ್ಲಿವೆ ಎರಡೂ ತಂಡಗಳೂ ಇವೆ.

ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದ್ದು, ಜಿಯೋ ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ. 2ನೇ ಅವಧಿಯಲ್ಲಿ ಇಬ್ಬನಿಯ ಪ್ರಭಾವದಿಂದಾಗಿ ಚೇಸಿಂಗ್ ಸುಲಭವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಟಾಸ್‌ ಗೆಲುವು ನಿರ್ಣಾಯಕವಾಗಲಿದೆ. ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಉಭಯ ತಂಡಗಳ ನಡುವೆ ಈವರೆಗೆ 36 ಪಂದ್ಯಗಳು ನಡೆದಿದ್ದು, ಇತ್ತಂಡಗಳೂ ತಲಾ 18 ಪಂದ್ಯಗಳಲ್ಲಿ ಗೆಲುವು ಕಂಡಿವೆ.

ಪ್ರತಿ ವರ್ಷವೂ ʻಈ ಸಲ ಕಪ್‌ ನಮ್ದೇ’ ಎನ್ನುವ ಘೋಷವಾಕ್ಯ ಈ ಬಾರಿಯಾದ್ರೂ ನಿಜವಾಗಲಿ ಅನ್ನೋದು ಅಭಿಮಾನಿಗಳ ಹೆಬ್ಬಯಕೆಯಾಗಿದೆ. ಅದಕ್ಕಾಗಿ ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲೆಂದು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ಎರಡೂ ತಂಡಗಳು ಇದುವರೆಗೂ ಟ್ರೋಫಿ ಗೆಲ್ಲದೇ ಇರುವುದರಿಂದ 18ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಮೇಲೆ ಕ್ರೀಡಾಭಿಮಾನಿಗಳ ಚಿತ್ತ ನೆಟ್ಟಿದೆ.

ಆರ್‌ಸಿಬಿ ಗೆಲ್ಲುವ ಫೇವರೆಟ್
ಕ್ವಾಲಿಫೈಯರ್‌-1ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (Punjab King) ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಆರ್‌ಸಿಬಿ (RCB) ನೇರವಾಗಿ ಫೈನಲ್‌ ಪ್ರವೇಶಿಸಿದೆ. ಹಿಂದಿನ ಆವೃತ್ತಿಗಳಲ್ಲಿನ ನೀರಸ ಪ್ರದರ್ಶನ ಮೀರಿರುವ ಆರ್‌ಸಿಬಿ, ಈ ವರ್ಷ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅರಂಭಿಕ ಕ್ರಮಾಂಕದಲ್ಲಿ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದಲ್ಲದೇ, ಈ ಬಾರಿ ಒಟ್ಟು 614 ರನ್‌ ಗಳಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಕಿಂಗ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟಿದಾರ್‌, ಮಯಾಂಕ್‌ ಅಗರ್ವಾಲ್‌, ಜಿತೇಶ್‌ ಶರ್ಮಾ ಬಲ ತುಂಬಿದ್ರೆ ಬೌಲಿಂಗ್‌ನಲ್ಲಿ ಮಾರಕ ವೇಗಿ ಜೋಷ್‌ ಹೇಜಲ್‌ವುಡ್‌, ಯಶ್‌ ದಯಾಳ್‌, ಸುಯಶ್‌, ಕೃನಾಲ್‌ ಪಾಂಡ್ಯ, ರೊಮಾರಿಯೊ ಶೆಫರ್ಡ್‌ ಹೀಗೆ ತಂಡದ ಪ್ರತಿಯೊಬ್ಬ ಸದಸ್ಯನೂ ಫೈನಲ್‌ ತನಕದ ತಂಡದ ಪಯಣದಲ್ಲಿ ತಮ್ಮ ಹೊಣೆಗಾರಿಕೆ ನಿಭಾಯಿಸುವ ಮೂಲಕ ಹೆಗಲು ನೀಡಿದ್ದಾರೆ.

ಅಯ್ಯರ್‌ ಕಡೆಗಣಿಸುವಂತಿಲ್ಲ
ಇನ್ನೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನ ಫೈನಲ್‌ವರೆಗೆ ಕೊಂಡೊಯ್ದಿದ್ದ, ಕೆಕೆಆರ್‌ಗೆ ಪ್ರಶಸ್ತಿ ತಂದುಕೊಟ್ಟಿದ್ದ ಶ್ರೇಯಸ್‌ ಅವರನ್ನೂ ಕಡೆಗಣಿಸುವಂತಿಲ್ಲ. 18 ವರ್ಷದ ಐಪಿಎಲ್‌ ಇತಿಹಾಸದಲ್ಲಿ ಮೂರು ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷವೂ ಪಂಜಾಬ್‌ ತಂಡವನ್ನು ಫೈನಲ್‌ ತಲುಪಿಸುವ ಮೂಲಕ ತಮ್ಮ ನಾಯಕತ್ವ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಪ್ರಶಸ್ತಿ ಗೆಲುವಿನ ಶ್ರೇಯವನ್ನು ಅಯ್ಯರ್‌ ನೀಡಿರಲಿಲ್ಲ ಎನ್ನುವ ಟೀಕೆಗಳು ಕೇಳಿಬಂದಿದ್ದವು. ಪ್ರಭ್‌ಸಿಮ್ರನ್‌ ಸಿಂಗ್‌, ಜೋಷ್‌ ಇಂಗ್ಲಿಸ್‌, ಪ್ರಿಯಾಂಶ್‌ ಆರ್ಯ, ಶಶಾಂಕ್‌ ಸಿಂಗ್‌, ಅಯ್ಯರ್‌ ಪಡೆಗೆ ಆಸರೆ ಒದಗಿಸಿದ್ದಾರೆ. ಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟಾರ್‌ ಸ್ಪಿನ್ನರ್‌ ಯಜ್ವೇಂದ್ರ ಚಾಹಲ್‌ ಕ್ವಾಲಿಫೈಯರ್‌-2 ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ತಂಡ, ಚಾಹಲ್‌ ಫೈನಲ್‌ನಲ್ಲಿ ಕಮ್‌ ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದೆ.

ಮಳೆ ಸಾಧ್ಯತೆ ಇದೆಯೇ?
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯ, ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಫೈನಲ್‌ಗೂ ಸಾಕ್ಷಿಯಾಗಲಿರುವ ಅಹಮದಾಬಾದ್‌ನಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂಗಳವಾರ ಮಳೆಯ ಸಾಧ್ಯತೆ ಶೇ.62ರಷ್ಟಿದೆ. ಆದರೆ, ಬೆಳಗ್ಗೆ ಅಥವಾ ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಮಳೆಯ ಸಾಧ್ಯತೆ ಶೇ.5ರಷ್ಟು ಎಂದು ಹವಾಮಾನ ವರದಿ ತಿಳಿಸಿದೆ.