RCB Unbox: ಡಬ್ಲ್ಯೂಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ ಮಹಿಳಾ ತಂಡಕ್ಕೆ ಪುರುಷರ ಟೀಂ ಭವ್ಯ ಸ್ವಾಗತ

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ್‌ ತಂಡದ ಅನ್‌ಬಾಕ್ಸ್‌ ಕಾರ್ಯಕ್ರಮವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಜರುಗಿದೆ. ಡಬ್ಲ್ಯೂಪಿಎಲ್‌-2024 ಟ್ರೋಫಿ ಗೆದ್ದ ಮಹಿಳಾ ಆಟಗಾರ್ತಿಯರಿಗೆ ಪುರುಷರ ತಂಡವು ಕಾರ್ಯಕ್ರಮದಲ್ಲಿ ಭವ್ಯ ಸ್ವಾಗತ (ಗಾರ್ಡ್‌ ಆಫ್‌ ಹಾನರ್) ಕೋರಿತು.

ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ವೇಳೆ ಡಬ್ಲ್ಯೂಪಿಎಲ್‌ ಟ್ರೋಫಿ ಹಿಡಿದು ಮಹಿಳಾ ತಂಡದ ನಾಯಕಿ ಫೀಲ್ಡಿಗೆ ಎಂಟ್ರಿ ಕೊಡುತ್ತಾರೆ. ಅವರ ಜೊತೆ ತಂಡದ ಆಟಗಾರರು ಸಾಲಾಗಿ ಬರುತ್ತಾರೆ. ಇವರನ್ನು ಆರ್‌ಸಿಬಿ ತಂಡದ ಪುರುಷ ಆಟಗಾರರು ಸಾಲಾಗಿ ನಿಂತು ಚಪ್ಪಾಳೆ ತಟ್ಟಿ ಸ್ವಾಗತ ಕೋರುತ್ತಾರೆ. ಈ ದೃಶ್ಯದ ವೀಡಿಯೋವನ್ನು ಆರ್‌ಸಿಬಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಮಹಿಳೆಯರ ಪ್ರೀಮಿಯರ್ ಲೀಗ್ (WPL) 2024 ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ವಿಶೇಷವಾಗಿತ್ತು. ಆದರೆ ಪುರುಷರ ಆರ್‌ಸಿಬಿ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಇದುವರೆಗೂ ಗೆದ್ದಿಲ್ಲ. ಸ್ಮೃತಿ ಮಂಧಾನ ನಾಯಕತ್ವದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ 2024 ಅನ್ನು ಗೆಲ್ಲುವ ಮೂಲಕ ಮಹಿಳಾ ತಂಡವು ಇತಿಹಾಸ ನಿರ್ಮಿಸಿದೆ. ಈ ಗೆಲುವು ಪುರುಷರ ತಂಡದ ಆತ್ಮವಿಶ್ವಾಸ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಕಳೆದ ಮೂರು ವರ್ಷಗಳಿಂದ ಆರ್‌ಸಿಬಿ ತಂಡದ ಅನ್‌ಬಾಕ್ಸ್‌ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಂಡಿದ್ದಾರೆ. ಕಳೆದ ವರ್ಷ ನಡೆದಿದ್ದ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಮತ್ತು ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಹಾಜರಿದ್ದರು.