2017ರ ಅಗಸ್ಟ್ ಬಳಿಕ ರೆಪೋ ದರ ಇಳಿಕೆ: ಕಡಿಮೆಯಾಗಲಿದೆ ಗೃಹ, ಕಾರು ಸಾಲದ ಹೊರೆ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 17 ತಿಂಗಳ ಬಳಿಕ ರೆಪೋ ದರವನ್ನು ಕಡಿತಗೊಳಿಸಿದೆ. ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ರೆಪೋ ದರದಲ್ಲಿ .25 ಮೂಲಾಂಕದಷ್ಟು ಕಡಿತ ಮಾಡಿದೆ.

ಇದರಿಂದ ರೆಪೋ ದರ ಈ ಮೊದಲಿದ್ದ ಶೇ. 6.50 ರಿಂದ ಶೇ. 6.25ಕ್ಕೆ ಇಳಿಕೆಯಾಗಿದ್ದು, ಮನೆ ಹಾಗೂ ಕಾರು ಖರೀದಿ ಮಾಡುವವರಿಗೆ ಸಹಾಯವಾಗಲಿದೆ. ಗೃಹ ಸಾಲದ ಇಎಮ್‍ಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಯಿದೆ.

ಈ ಹಿಂದೆ ನೇಮಕಗೊಂಡಿದ್ದ ರಘುರಾಂ ರಾಜನ್ ಅವರು ರೆಪೋ ದರವನ್ನು ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿರಲಿಲ್ಲ. ಈಗ ಹೊಸದಾಗಿ ನೇಮಕಗೊಂಡಿರುವ ಶಕ್ತಿಕಾಂತ್‍ದಾಸ್ ಅವರ ನೇತೃತ್ವದಲ್ಲಿ ನಡೆದ ಮೊದಲ ಎಂಪಿಸಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಆರ್‌ಬಿಐನ ಆರು ಸದಸ್ಯರ ಪಾಲಿಸಿ ಸಮಿತಿ ಮುಂದೆ ರೆಪೋ ದರ ಇಳಿಕೆ ಸಂಬಂಧಿಸಿದಂತೆ ಮಂಡನೆಯಾಗಿದ್ದ ಪ್ರಸ್ತಾವನೆಗೆ 4:2 ರಷ್ಟು ಮತ ಬಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರವೀಂದ್ರ ದೋಲಾಕಿಯ, ಪಾಮಿ ದುವಾ, ಮೈಕೆಲ್ ಪಾತ್ರ ಮತ್ತು ಗವರ್ನರ್ ಶಕ್ತಿಕಾಂತ್ ದಾಸ್ ಅವರು ನಿರ್ಧಾರರ ಪರ ಮತ ಹಾಕಿದರೆ, ಡೆಪ್ಯೂಟಿ ಗವರ್ನರ್ ವಿರಾಳ್ ಆಚಾರ್ಯ ಮತ್ತು ಚೇತನ್ ಘಾಟ್ಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಿದರು.

ರೆಪೋ ದರ ಇಳಿಕೆಯ ಬೆನ್ನಲ್ಲೇ ಹಣಕಾಸು ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿ, .25 ಮೂಲಾಂಕ ಇಳಿಕೆ ಮಾಡಿದ್ದರಿಂದ ದೇಶದ ಆರ್ಥಿಕತೆಗೆ ನೆರವಾಗಲಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವುದರಿಂದ ಮನೆ ಖರೀದಿ ಮತ್ತು ಸಣ್ಣ ಉದ್ಯಮಿಗಳಿಗೆ ಸಹಾಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.

ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐ ಯಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *