ರೆಪೋ ರೇಟ್ ಏರಿಸಿದ ಆರ್‌ಬಿಐ – ಹೆಚ್ಚಳವಾಗಲಿದೆ ಲೋನ್, ಇಎಂಐಗಳ ಬಡ್ಡಿ ದರ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರವನ್ನು ಶೇ.4.90 ರಷ್ಟು ಏರಿಕೆ ಮಾಡಿದೆ. ರೆಪೋ ರೇಟ್ ಏರಿಕೆ ಮಾಡಿದ ಬೆನ್ನಲ್ಲೇ ಸಾಲ ಮತ್ತು ಇಎಂಐಗಳ ಬಡ್ಡಿ ದರ ಏರಿಕೆಯಾಗಲಿದೆ.

RBI ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಎಲ್ಲ 6 ಸದಸ್ಯರು ರೆಪೋ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದರು. ಡಾಲರ್ ಎದುರು ರೂಪಾಯಿ ಕುಸಿತಗೊಳ್ಳುತ್ತಿರುವ ನಡುವೆ ನಿಯಂತ್ರಣ ಕ್ರಮವಾಗಿ ರೆಪೋ ರೇಟ್ ಏರಿಕೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದನ್ನೂ ಓದಿ: ಮತ್ತೆ ಶುರುವಾಯ್ತು ಜಹಾಗೀರ್‌ಪುರಿಯಲ್ಲಿ ಕಲ್ಲು ತೂರಾಟ – ವಾಹನಗಳು ಧ್ವಂಸ

ಏಪ್ರಿಲ್ ತಿಂಗಳ, ಚಿಲ್ಲರೆ ಹಣದುಬ್ಬರ ದರ ಶೇ.7.79 ರಷ್ಟಿದ್ದು, ಇದು 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇದರಿಂದ ಎಚ್ಚರಿಕೆ ಕ್ರಮ ಕೈಗೊಂಡಿರುವ ಆರ್‌ಬಿಐ ಹಣದುಬ್ಬರ ನಿಯಂತ್ರಿಸಲು ಹಲವು ಕ್ರಮ ಕೈಗೊಂಡಿದೆ. ಇದರಲ್ಲಿ ರೆಪೋ ದರ ಏರಿಕೆಯೂ ಒಂದು ಪ್ರಮುಖ ಕ್ರಮವಾಗಿದೆ.

ಎಂಪಿಸಿ ಹಣಕಾಸು ನೀತಿ ಸಭೆಯು ಜೂನ್ 6 ರಿಂದ 8ರವೆರೆಗೆ ಒಟ್ಟು 3 ದಿನ ನಡೆಯಲಿದೆ. ಈ ಹಿಂದೆ ಮೇ 4 ರಂದು ರೆಪೋ ದರವನ್ನು ಏರಿಕೆ ಮಾಡಲಾಗಿತ್ತು. 40 ಬೇಸಿಸ್ ಪಾಯಿಂಟ್ ಏರಿಕೆ ಮಾಡುವ ಮೂಲಕ ಶೇ.4.40ಕ್ಕೆ ಹೆಚ್ಚಿಸಲಾಗಿತ್ತು. ನಗದು ಮೀಸಲು ಅನುಪಾತವನ್ನು 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿ ಶೇ.4.50ಕ್ಕೆ ಹೆಚ್ಚಿಸಲಾಗಿತ್ತು. ಈ ಬೆನ್ನಲ್ಲೇ ಸಾಲಗಳ ಮೇಲಿನ ಬಡ್ಡಿ ದರವೂ ಹೆಚ್ಚಳವಾಗಿತ್ತು. ಇದೀಗ ಮತ್ತೆ 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿ ಶೇ.4.90 ಹೆಚ್ಚಿಸಲಾಗಿದೆ. ಇದನ್ನೂ ಓದಿ: ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!

ಮೇ 4 ರಂದು ಆರ್‌ಬಿಐ ರೆಪೋ ರೇಟ್ 40 ಬೇಸಿಸ್ ಪಾಯಿಂಟ್ ಹೆಚ್ಚಳ ಘೋಷಿಸಿತು. ಆ ಬಳಿಕ ಸಾರ್ವಜನಿಕ, ಖಾಸಗಿ ಬ್ಯಾಂಕ್, ಫೈನಾನ್ಸ್ ಕಂಪನಿಗಳು, ಗೃಹ ಸಾಲ ಸೇರಿದಂತೆ ಇತರೆ ಎಲ್ಲ ಸಾಲಗಳ ಮೇಲಿನ ಬಡ್ಡಿದರ ಏರಿಕೆಯಾಗಿದೆ. ಈಗಾಗಲೇ ಸಾಲ ಪಡೆದಿರುವ ಗ್ರಾಹಕರ ಇಎಂಐ ಹೆಚ್ಚಳವಾಗಿದೆ. ಇದೀಗ ಮತ್ತೆ ರೆಪೋ ರೇಟ್ ಹೆಚ್ಚಳವಾಗಿರುವದರಿಂದ ಸಾಲಗಾರರಿಗೆ ಮತ್ತೆ ಬಡ್ಡಿ ಹೊರೆ ಹೆಚ್ಚಲಿದ್ದು, ಇದು ಸಾಲಗಾರರ ಮೇಲೆ ನೇರ ಪರಿಣಾಮ ಬೀರಲಿದೆ.

ರೆಪೋ ರೇಟ್ ಎಂದರೇನು?
ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ.

Comments

Leave a Reply

Your email address will not be published. Required fields are marked *