ಧೋನಿಯನ್ನು ಯಾವ ಕ್ರಮಾಂಕದಲ್ಲಿ ಕಳುಹಿಸಬೇಕು – ಕೊಹ್ಲಿ, ರವಿಶಾಸ್ತ್ರಿ ಚರ್ಚೆ ವಿಡಿಯೋ ವೈರಲ್

ಲಂಡನ್: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ಟೂರ್ನಿಯಿಂದ ಹೊರ ನಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಟೀಂ ಇಂಡಿಯಾ ಪಂದ್ಯದಲ್ಲಿ ಎಡವಿದ್ದು ಎಲ್ಲಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದೆ. ಇದೇ ಸಂದರ್ಭದಲ್ಲಿ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ನಡುವಿನ ಚರ್ಚೆಯ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ.

ಪಂದ್ಯದಲ್ಲಿ ಕೊಹ್ಲಿ ಹಾಗೂ ರವಿಶಾಸ್ತ್ರಿ ನಡುವೆ ನಿರ್ಧಾರ ಕೈಗೊಳ್ಳುವಲ್ಲಿ ಭಿನ್ನಭಿಪ್ರಾಯ ವ್ಯಕ್ತಪಡಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಪ್ರಮುಖವಾಗಿ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಇಬ್ಬರ ನಡುವೆ ಚರ್ಚೆ ನಡೆದಿದೆ.

ಪಂದ್ಯದಲ್ಲಿ ಧೋನಿ ಅವರನ್ನು ನಂ.7 ಕ್ರಮಾಂಕದಲ್ಲಿ ಕಳುಹಿಸಿಕೊಡಲಾಗಿತ್ತು. ಇದಕ್ಕೂ ಮುನ್ನ ದಿನೇಶ್ ಕಾರ್ತಿಕ್ ಔಟಾಗುತ್ತಿದಂತೆ 5ನೇ ಸ್ಥಾನದಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ನಡೆಸಿದ್ದರು. ಆದರೆ 33 ರನ್ ಗಳಿಸಿ ರಿಷಬ್ ಔಟಾಗುತ್ತಿದಂತೆ ಕೋಚ್ ಬಳಿ ಬಂದ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ಪಂತ್, ಜಡೇಜಾ ಮತ್ತು ಧೋನಿ ಮಾತ್ರ ಎರಡಂಕ್ಕಿ ತಲುಪಿದ್ದರು.

ಇತ್ತ ರೋಚಕ ಹಂತದಲ್ಲಿ ಧೋನಿ ಔಟಾಗುತ್ತಿದಂತೆ ತಂಡ ಸೋಲುಂಡಿತ್ತು. ಇದರೊಂದಿಗೆ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಅವಕಾಶ ಪಡೆದುಕೊಂಡಿತು. ನಿನ್ನೆ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದೆ.

ಈ ಬಾರಿ ಇತ್ತಂಡಗಳಲ್ಲಿ ಯಾವುದೇ ತಂಡ ವಿಶ್ವಕಪ್ ಗೆದ್ದರೂ ಕೂಡ ಇತಿಹಾಸ ಸೃಷ್ಟಿಯಾಗಲಿದೆ. 27 ವರ್ಷ ಅಂದರೆ 27 ವರ್ಷದ ಬಳಿಕ ಇಂಗ್ಲೆಂಡ್ ಫೈನಲ್ ಪ್ರವೇಶ ಮಾಡಿದೆ. ಇತ್ತ 2015 ರಲ್ಲಿ ಕಿವೀಸ್ ಫೈನಲ್ ತಲುಪಿತ್ತು. ಇದುವರೆಗೂ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ 5 ಬಾರಿ ವಿಶ್ವಕಪ್ ಗೆಲುವು ಪಡೆದಿದ್ದು, ವೆಸ್ಟ್ ಇಂಡೀಸ್ ಮತ್ತು ಭಾರತ ತಲಾ 2 ಬಾರಿ, ಶ್ರೀಲಂಕಾ, ಪಾಕಿಸ್ತಾನ 1 ಬಾರಿ ವಿಶ್ವಕಪ್ ಗೆಲುವು ಪಡೆದಿದೆ. ಜುಲೈ 14 ರಂದು ವಿಶ್ವಕಪ್ ಫೈನಲ್ ನಡೆಯಲಿದ್ದು, ಇತ್ತಂಡಗಳು ಕಪ್ ಗೆಲ್ಲುವ ಆತ್ಮವಿಶ್ವಾಸದಲ್ಲಿ ಇದೆ.

Comments

Leave a Reply

Your email address will not be published. Required fields are marked *