ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ

ಬೆಂಗಳೂರು: ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಹಿರಿಯ ಪತ್ರಕರ್ತ ರವಿ ಬೆಳಗೆರೆ, ಮೂರು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಹಾಕಿದ್ದ ಸ್ಟೇಟಸ್ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಹೌದು. ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ನೀಡಿದ ಮಾಹಿತಿ ಪ್ರಕಾರ 2017ರ ಆಗಸ್ಟ್ 26ಕ್ಕೆ ಸುನೀಲ್ ಹೆಗ್ಗರವಳ್ಳಿ ಹತ್ಯೆ ನಡೆಯಬೇಕಿತ್ತು. ಆದರೆ ಈ ಹತ್ಯೆಯನ್ನು ವಿಫಲಗೊಳಿಸಿದ್ದು ರವಿ ಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ಎನ್ನುವ ಮಾಹಿತಿ ಸಿಕ್ಕಿದೆ.

ರವಿ ಬೆಳಗೆರೆ ಒಂದು ಎಫ್‍ಬಿ ಪೋಸ್ಟ್ ಮಾಡಿದ್ದರು. ಇದರಲ್ಲಿ “ಹೆಜ್ಜೆ ಇಡುವಾಗ ತುಂಬಾ ಎಚ್ಚರ ಇರಬೇಕು. ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ” ಎಂದು ಬರೆದು ತಮ್ಮ ಎರಡನೇ ಪತ್ನಿ ಯಶೋಮತಿಯೊಂದಿಗೆ ಇರುವ ಫೋಟೋವನ್ನು ಹಾಕಿದ್ದರು. ಹತ್ಯೆ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಬೆಳಗರೆ ಈ ಪೋಸ್ಟ್ ಪ್ರಕಟ ಮಾಡಿದ್ದಾರಾ ಎನ್ನುವ ಅನುಮನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ರವಿ ಬೆಳಗೆರೆಯ ಎರಡನೇ ಪತ್ನಿ ಯಶೋಮತಿ ಹಾಗೂ ಸುನೀಲ್ ಹೆಗ್ಗರವಳ್ಳಿ ನಡುವೆ ಅನೈತಿಕ ಸಂಬಂಧಿವಿತ್ತು. ಈ ಬಗ್ಗೆ ಕೆಲಸದಾಕೆ ಮಾಹಿತಿ ನೀಡುತ್ತಿದ್ದರು. ಒಂದು ಬಾರಿ ಮಧ್ಯರಾತ್ರಿ ರವಿ ಬೆಳಗೆರೆ ಮನೆಗೆ ಬಂದಾಗ ಸುನೀಲ್ ಓಡಿಹೋಗಿದ್ದರು ಎಂಬ ಮಾತುಗಳೂ ಕೂಡ ಕೇಳಿಬಂದಿವೆ. ಹೀಗಾಗಿ ರವಿ ಬೆಳಗೆರೆ ಅವರ ಈ ಸ್ಟೇಟಸ್ ಹಲವು ಅನುಮಾನಗಳನ್ನ ಮೂಡಿಸಿದೆ.

ಆಗಸ್ಟ್ ನಲ್ಲಿ ಹಾಕಿದ್ದ ಮತ್ತೊಂದು ಸ್ಟೇಟಸ್ ನಲ್ಲಿ ರವಿ ಬೆಳಗೆರೆ ತನಗೆ ಮೋಸವಾಗಿದೆ ಎಂದು ಹೇಳಿಕೊಂಡಿದ್ದರು. ಆ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದರು: 

” ನಾನು ಕಿರಿ ಕಿರಿ ಮನುಷ್ಯ ಅಲ್ಲ. ಸಿಡಿಮಿಡಿ ಇಲ್ಲ. ಸಿಟ್ಟು ಮೊದಲಿತ್ತು. ಈಗ ಮರೆತೇ ಹೋಗಿದೆ. ಈಗಲೂ ಒಮ್ಮೊಮ್ಮೆ ಗುರ್ರ್ ಅಂತೀನಿ. ದ್ವೇಷ ನನ್ನ ಜಾಯಮಾನವಲ್ಲ. ಅಸಹ್ಯವಾದರೆ ದೂರ ಸರಿದುಬಿಡ್ತೇನೆ. ನನ್ನದು ಇಂಟೆನ್ಸ್ ಆದ ಪ್ರೀತಿ. ತೀವ್ರವಾಗಿ ಪ್ರೀತಿಸುತ್ತೇನೆ. ಕೆಲಬಾರಿ ಅವರಿಗೆ ಕಿರಿಕಿರಿ ಆಗುವಷ್ಟು. ಮಾತು, ಹರಟೆ, ನಗು, ಕೊಂಚ ಪೋಲಿತನ, ಇಂಟೆನ್ಸ್ ಆದ ಕಾಮ, ಅತಿಯಾದ ಭಾವುಕತೆ, ಅಮ್ಮನ ನಾಸ್ಟಾಲ್ಜಿಯಾ, ಅವಳನ್ನು ಎಲ್ಲರಲ್ಲೂ ಹುಡುಕೋದು…..ಇವೆಲ್ಲ ನನ್ನ ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್. ಆದರೆ ಮೋಸ ಸಹಿಸೋದು ತುಂಬಾ ಕಷ್ಟ. ಮೋಸ ನನಗೆ ಆಗಿದ್ದರೂ ನರಳೋದು ನಾನೇ. ತಪ್ಪು ಮಾಡಿದೋರನ್ನ ಕ್ಷಮಿಸಬಹುದು. ಮೋಸ ಮಾಡಿದೋರನ್ನ ಕ್ಷಮಿಸೋಕಾಗಲ್ಲ. ಯಾಕೆಂದರೆ, ಚೆನ್ನಾಗಿ ಯೋಚನೆ ಮಾಡಿ, ಪ್ಲಾನ್ ಮಾಡಿ ಉದ್ದೇಶವಿಟ್ಟುಕೊಂಡೇ ಅವರು ಮೋಸ ಮಾಡಿರುತ್ತಾರೆ. ಗೊತ್ತಿಲ್ಲದೆ ಮೋಸ ಮಾಡಿಬಿಟ್ಟೆ ಅನ್ನೋಕೆ ಆಗಲ್ಲ.

ಗೊತ್ತಿಲ್ಲದೆ ತಪ್ಪು ಮಾಡಿದೆ ಅನ್ನಬಹುದು. ನಾನು ತುಂಬಾ ಹುಷಾರು, ನಂಗೆ ಯಾರೂ ಮೋಸ ಮಾಡೋಕಾಗಲ್ಲ, ನಾನು ಮೈ ಮರೆಯಲ್ಲ ಅಂತೆಲ್ಲ ಹೇಳಿಕೊಳ್ತಿದ್ದೆ. but, ಒಂದು ಮೋಸ ಹೇಗೆ ಆಯಿತು ಅಂದ್ರೆ, ಅವತ್ತೇ ನಾನು ಸತ್ತು ಹೋಗಿಬಿಟ್ಟೆ. ನಂಗೆ ಗೊತ್ತು, ನಾನು ಈ ಜನ್ಮದಲ್ಲಿ ಅದರಿಂದ ಚೇತರಿಸಿಕೊಳ್ಳಲಾರೆ. ಒಬ್ಬ ಗೆಳೆಯ ಬಂದು ‘ ಆದದ್ದು ಆಯಿತು. ಕ್ಷಮಿಸಿ ಮತ್ತೆ ರಾಜಿ ಆಗಿಬಿಡು’ ಅಂದ. ” ನೋಡೋ, ನನ್ನ ಆಫೀಸ್ ನ ಒಂದು ರೌಂಡ್ ಹಾಕಿ ಬಾ. ಎಲ್ಲೊ ಒಂದು ಕಡೆ ನಿಂಗೆ ಕೊಳಕು ಕಾಣಬಹುದು. ಆದರೆ ಬಾತ್ ರೂಮ್ ನಲ್ಲಿ ಒಂದು ಹನಿ ನೀರೂ ಚೆಲ್ಲಿರಲ್ಲ. ಹೇಟ್ ಇಟ್. ಅದು ತುಂಬಾ ಕ್ಲೀನ್ ಆದ ಜಾಗ. ಹಾಗಂತ ವಿಸರ್ಜನೆ ಮಾಡೋ ಜಾಗದ ಪಕ್ಕ ಕೂತು ಊಟ ಮಾಡೋಕೆ ಆಗಲ್ಲ” ಅಂದೆ . ಅವನು ಸುಮ್ಮನಾದ.

ನೀವು ರಾಜಕುಮಾರಿ ಡಯಾನಾ ಫೋಟೋ ನೋಡಿ. ಇಷ್ಟ ಆಗ್ತಾಳೆ. ಆಕೆ ಸುಂದರಿ. ಆದರೆ ಎಂಥ ವಂಚಕಿ! ರಾಜಕುಮಾರ ಚಾಲ್ರ್ಸ್ ಅದನ್ನು ಹೇಳಿಕೊಂಡಿಲ್ಲ. ಅನುಭವಿಸಿದ ನೋವು ಸುಳ್ಳು ಅಂತೀರಾ? ನಂಗೆ ತಾಯಿ ಥೆರೇಸ ತುಂಬಾ ಇಷ್ಟ. ನೋಡಲು ಪರಮ ಕುರೂಪಿ. ಆದರೆ ವಂಚಕಿಯಲ್ಲ. ಅಲ್ಲವಾ. ಕೆಲವು ವಿಷಯಗಳಲ್ಲಿ ನಾನು ಬೆರಗಾಗುವಷ್ಟು ಪ್ರಾಮಾಣಿಕ. ಉದಾಹರಣೆಗೆ ದುಡ್ಡು. ಯಾರಿಗೂ ನಾನು ಮೋಸ ಮಾಡಿಲ್ಲ. ಕಂಡವರ ಹಣ ಮುಟ್ಟಿಲ್ಲ. ಉಳಿದಂತೆ ನಾನು ಬೇಲಿ ಹಾರಿದ್ದುಂಟು. ನನ್ನನ್ನ ಯಾರೂ ಒಂದು ಚೌಕಟ್ಟು ಹಾಕಿ ಇಡಲಾರರು. ತಪ್ಪು ಮಾಡಿದ್ದೇನೆ. ಅದು ಗೊತ್ತಾಗುವಂತೆ, ಚೆನ್ನಾಗಿ ತಿಳಿಸಿ ಮಾಡಿದ್ದೇನೆ. ಕ್ಷಮೆ ಕೇಳಿದ್ದೇನೆ. ಆದರೆ ಮೋಸ ಮಾಡಿಲ್ಲ. ಅನುಮಾನ ಇದೆಯಾ?”

 ರವಿ ಬೆಳಗೆರೆ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 307(ಕೊಲೆ ಸಂಚು), 120 ಬಿ ಪಿತೂರಿ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *