ಪರಿಶೀಲನೆ ವೇಳೆ 802 ಬಾಟಲಿ ಮದ್ಯ ನಾಪತ್ತೆ – ಅಧಿಕಾರಿಗಳ ಬಳಿ ಇಲಿಗಳು ಕುಡಿದಿವೆ ಎಂದ ವ್ಯಾಪಾರಿಗಳು!

ರಾಂಚಿ: ಅಬಕಾರಿ (Excise Department) ಅಧಿಕಾರಿಗಳ ದಾಳಿ ವೇಳೆ, ನಾಪತ್ತೆಯಾಗಿದ್ದ 802 ಬಾಟಲಿ ಮದ್ಯವನ್ನು ಇಲಿಗಳು ಕುಡಿದಿವೆ ಎಂದು ವ್ಯಾಪಾರಿಗಳು ಹೇಳಿರುವುದು ಜಾರ್ಖಂಡ್‌ನ (Jharkhand) ಧನ್‌ಬಾದ್‌ನಲ್ಲಿ ನಡೆದಿದೆ. ಈ ಪ್ರಕರಣದಿಂದ ಭ್ರಷ್ಟಾಚಾರ ಇಲಿಗಳ ಹೆಸರನ್ನು ಹಾಳುಮಾಡುತ್ತಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಸೆಪ್ಟೆಂಬರ್ 1 ರಂದು ಜಾರ್ಖಂಡ್‌ನಲ್ಲಿ ಹೊಸ ಮದ್ಯ ನೀತಿ ಜಾರಿಗೆ (Jharkhand New Liquor Policy) ಬರಲಿದೆ. ಇದಕ್ಕಾಗಿ ಅಧಿಕಾರಿಗಳು ಧನ್‌ಬಾದ್‌ನಲ್ಲಿ ಮದ್ಯದ ಸ್ಟಾಕ್‌ ಪರಿಶೀಲನೆ ನಡೆಸಿದರು. ಈ ವೇಳೆ, ಅಧಿಕಾರಿಗಳಿಗೆ 802 ಬಾಟಲಿಗಳಲ್ಲಿದ್ದ ಮದ್ಯ ಖಾಲಿಯಾಗಿರುವುದು ಗೊತ್ತಾಗಿದೆ. ವ್ಯಾಪಾರಿಗಳ ಬಳಿ ಈ ಬಗ್ಗೆ ಕೇಳಿದಾಗ, ಅವುಗಳನ್ನು ಇಲಿಗಳು ಕುಡಿಯುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿಫಲನಾಗಿದ್ದೇನೆ ಎನಿಸುತ್ತಿದೆ – ದೆಹಲಿಯಲ್ಲಿ ಕಾಣೆಯಾದ ಯುವತಿಯ ರೂಮ್‌ನಲ್ಲಿ ಡೆತ್‌ನೋಟ್ ಪತ್ತೆ

ವ್ಯಾಪಾರಿಗಳ ಉತ್ತರಕ್ಕೆ ಅಧಿಕಾರಿಗಳು ಇದು ಅಸಂಬದ್ಧ ಉತ್ತರ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಈ ನಷ್ಟಕ್ಕೆ, ದಂಡ ಪಾವತಿಸುವಂತೆ ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಲಾಗುವುದು ಎಂದು ಸಹಾಯಕ ಅಬಕಾರಿ ಆಯುಕ್ತೆ ರಾಮಲೀಲಾ ರಾವಣಿ ತಿಳಿಸಿದ್ದಾರೆ.

ಇಲಿಗಳ ಮೇಲೆ ಇಂತಹ ಆರೋಪ ಬರುತ್ತಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ ಪೊಲೀಸರು ವಶಪಡಿಸಿಕೊಂಡ ಸುಮಾರು 10 ಕೆಜಿ ಗಾಂಜಾದಲ್ಲಿ 9 ಕೆಜಿ ಗಾಂಜಾವನ್ನು ಇಲಿಗಳು ತಿಂದಿವೆ ಎಂದಿದ್ದರು. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು.

ಜಾರ್ಖಂಡ್‌ನ ಹೊಸ ಮದ್ಯ ನೀತಿ ಅಡಿಯಲ್ಲಿ, ಮದ್ಯದ ಅಂಗಡಿಗಳ ನಿರ್ವಹಣೆ ಮತ್ತು ಹಂಚಿಕೆ ರಾಜ್ಯ ಸರ್ಕಾರದ ನಿಯಂತ್ರಣದಿಂದ ಖಾಸಗಿ ಪರವಾನಗಿದಾರರಿಗೆ ಸಿಗಲಿದೆ. ಆದಾಯ ಸಂಗ್ರಹಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ರಾಜ್ಯದ ಮೇಲಿನ ಆಡಳಿತಾತ್ಮಕ ಹೊರೆಯನ್ನು ಕಡಿಮೆ ಮಾಡುವುದು ಈ ನೀತಿಯ ಗುರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 2 ಪಬ್ ಮೇಲೆ ದಾಳಿ – ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳು ಅರೆಸ್ಟ್