ಸಿಎಂ ಪೋಸ್ಟ್‌ಗೆ 2,500 ಕೋಟಿ.. ಮಿನಿಸ್ಟರ್‌ಗಾಗಿ 500 ಕೋಟಿ ರೂ. – ಬಿಜೆಪಿ ವಿರುದ್ಧ ಕಾಂಗ್ರೆಸ್‌ ಭ್ರಷ್ಟಾಚಾರ ಅಸ್ತ್ರ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹೊತ್ತಲ್ಲಿ ಬಿಜೆಪಿ (BJP) ಸರ್ಕಾರದ ವಿರುದ್ಧ ಮತ್ತೊಂದು ಭ್ರಷ್ಟಾಚಾರದ ಅಸ್ತ್ರವನ್ನು ಕಾಂಗ್ರೆಸ್‌ (Congress) ಪ್ರಯೋಗಿಸಿದೆ. ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಪ್ರಕಟಿಸಿ, ಡಬಲ್‌ ಎಂಜಿನ್‌ ಸರ್ಕಾರವನ್ನು ಟ್ರಬಲ್‌ ಎಂಜಿನ್‌ ಸರ್ಕಾರ ಎಂದು ಕಾಂಗ್ರೆಸ್‌ ವ್ಯಂಗ್ಯ ಮಾಡಿದೆ.

ವಿವಿಧ ಇಲಾಖೆಗಳ ನೇಮಕಾತಿ ದರ ಪ್ರಕಟಿಸಿ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು‌ ಕೊಟ್ಟಿದೆ. 40 ಪರ್ಸೆಂಟ್ ಸರ್ಕಾರದಲ್ಲಿ ಎಲ್ಲವೂ ಮಾರಾಟವಾಗಿದೆ. ನೇಮಕಾತಿಗಳಲ್ಲಿ ಅಕ್ರಮ, ಸಿಎಂ ಸ್ಥಾನಕ್ಕೂ ದರ ನಿಗದಿಯಾಗಿದೆ ಎಂದು ಕುಹಕವಾಡಿದೆ. ಭ್ರಷ್ಟಾಚಾರದ ರೇಟ್ ಕಾರ್ಡ್ ಬಿಡುಗಡೆ ಮಾಡಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಅಂದ್ರು ಪ್ರಧಾನಿ: ಶೋಭಾ ಕರಂದ್ಲಾಜೆ

ಎಐಸಿಸಿ ನಾಯಕರು ಸಹ ರೇಟ್‌ ಕಾರ್ಡ್‌ ಬಿಡುಗಡೆ ಮಾಡಿ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಪವನ್ ಖೇರ, ಇಂದು ಅತ್ಯಂತ ಮಹತ್ವದ ದಿನ. ಬಿಜೆಪಿ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಪ್ರಾರಂಭ ಮಾಡಿದೆ. ಆದರೆ ಕರ್ನಾಟಕದ ಜನ ಮಾತ್ರ ಪದೇ ಪದೇ ಎಲ್ಲ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಕರ್ನಾಟಕದ ಜನರಿಗೆ ಗೊತ್ತಿದೆ. ಬಿಜೆಪಿಯವರಿಗೂ ರೇಟ್ ಕಾರ್ಡ್ ಬಗ್ಗೆ ಗೊತ್ತಿದೆ. 40% ಅಲ್ಲ 50% ಕಮಿಷನ್ ನಡೆಯುತ್ತಿದೆ ಎಂಬುದು ವಾಸ್ತವ ಅಂಶ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರಧಾನಿಯವರ ಪ್ರಾಧಾನ್ಯತೆ ಏನು ಎನ್ನೋದು ಇದರಿಂದ ಗೊತ್ತಾಗುತ್ತಿದೆ. ಆಡಳಿತ ನಡೆಸುವುದು ಬಿಟ್ಟು ಬೇರೆ ಎಲ್ಲವನ್ನೂ ಮಾಡ್ತಾ ಇದ್ದಾರೆ ಮೋದಿ. ಸಿಎಂ ಪೋಸ್ಟ್‌ಗೆ 2,500 ಕೋಟಿ ರೂ., ಮಿನಿಸ್ಟರ್ ಪೋಸ್ಟ್‌ಗೆ 500 ಕೋಟಿ ರೂ., ವರ್ಗಾವಣೆಗೆ 5 ರಿಂದ 15 ಕೋಟಿ ರೂ., ಎಂಜಿನಿಯರ್ ಹುದ್ದೆಗಳಿಗೆ 1 ರಿಂದ 5 ಕೋಟಿ ರೂ. ಹೀಗೆ ಹಣಕ್ಕೆ ಹುದ್ದೆಗಳು ಮಾರಾಟ ಆಗ್ತಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ, ಮೋದಿ ರ‍್ಯಾಲಿ ರದ್ದು ಮಾಡಿ: ಹೆಚ್‌ಡಿಕೆ ವಾಗ್ದಾಳಿ

ಜನರಿಗೆ ಬಿಜೆಪಿಯವರ ಬಗ್ಗೆ ಸಿಟ್ಟಿದೆ. ಭ್ರಷ್ಟಾಚಾರದ ರೇಟ್ ಕಾರ್ಡ್ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ. ಇದೇ ಸಿಟ್ಟು ಬಿಜೆಪಿ ವಿರುದ್ಧ ಜನರು ವೋಟು ಒತ್ತುವಂತೆ ಮಾಡುತ್ತದೆ. ಬಿಜೆಪಿ ಮತ್ತೆ ಬಂದರೆ 40% ಕಮಿಷನ್ ಭ್ರಷ್ಟಾಚಾರ 80% ಆಗುತ್ತದೆ ಎಂಬ ಆತಂಕ ಜನರಿಗೆ ಇದೆ. ಇದೇ ಭಾವನೆಗಳು ಬಿಜೆಪಿಗೆ ಹೊಡೆತ ಕೊಡಲಿದೆ ಎಂದು ಎಚ್ಚರಿಸಿದ್ದಾರೆ.