ಮಹಿಳೆಯರು, ಮಕ್ಕಳು ಧರಿಸುವ ಬಟ್ಟೆಗಳು ಅತ್ಯಾಚಾರಕ್ಕೆ ಕಾರಣವಲ್ಲ- ನಿರ್ಮಲಾ ಸೀತಾರಾಮನ್

ನವದೆಹಲಿ: ಮಹಿಳೆಯರು ಮತ್ತು ಮಕ್ಕಳು ಧರಿಸುವ ಬಟ್ಟೆಗಳೇ ಅತ್ಯಾಚಾರಕ್ಕೆ ಕಾರಣವಲ್ಲ ಎಂಬುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸೋಮವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಸಚಿವೆ, ಇತ್ತೀಚೆಗೆ ಧರಿಸುವ ಬಟ್ಟೆಗಳಿಂದ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿವೆ ವಾದವನ್ನು ಖಂಡಿಸಿದ್ದಾರೆ. ಹೆಚ್ಚಿನ ಎಲ್ಲಾ ಪ್ರಕರಣಗಳು ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತವೆ. ಅಲ್ಲದೇ ಬಂಧುಗಳು, ಸ್ನೇಹಿತರು ಹಾಗೂ ನೆರೆಮನೆಯವರೇ ಆರೋಪಿಗಳಾಗುತ್ತಾರೆ ಅಂತ ಹೇಳಿದ್ರು.

ಒಂದು ವೇಳೆ ಧರಿಸುವ ಬಟ್ಟೆಗಳಿಂದಲೇ ಪ್ರೇರೇಪಿತರಾಗಿ ಅತ್ಯಾಚಾರ ಪ್ರಕರಣಗಳು ನಡೆಯುವುದು ಎಂದಾದರೆ, ವೃದ್ಧೆಯರು ಮತ್ತು ಸಣ್ಣ-ಪುಟ್ಟ ಮಕ್ಕಳ ಮೇಲೆ ಯಾಕೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ ಎಂಬುದಾಗಿ ಪ್ರಶ್ನಿಸಿದ್ದಾರೆ.

ಅಪ್ತಾಪ್ತರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಕಾನೂನು ಮತ್ತು ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು. ಅಲ್ಲದೇ ಈ ಮಧ್ಯೆ ಹೆತ್ತವರು ಕೂಡ ತಮ್ಮ ಮಕ್ಕಳ ಮೇಲೆ ಗಮನವಿಟ್ಟಿರಬೇಕು. ಒಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ ಅಂತ ಅವರು ಅಭಿಪ್ರಾಯಿಸಿದ್ದಾರೆ.

ಜಮ್ಮು ಕಾಶ್ಮೀರದ ಕಟುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಘಟನೆಯ ಬಳಿಕ ಕೇಂದ್ರ ಸರ್ಕಾರ ಅಪ್ರಾಪ್ತರ ಮೇಲೆ ಅತ್ಯಾಚಾರ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಜಾರಿಗೆ ತಂದಿದೆ. ಈ ಸಂಬಂಧ ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಸುಗ್ರೀವಾಜ್ಞೆ ಹೊರಡಿಸಿ ತಿದ್ದುಪಡಿ ಮಾಡಲಾಗಿದೆ.

Comments

Leave a Reply

Your email address will not be published. Required fields are marked *