ಹೋಳಿ ಹಬ್ಬದ ತಿಂಡಿ ಕೊಡಿಸುವುದಾಗಿ ಹೇಳಿ ಚಿಕ್ಕಪ್ಪನಿಂದಲೇ ಅತ್ಯಾಚಾರ- 3ರ ಬಾಲಕಿಯ ಸ್ಥಿತಿ ಗಂಭೀರ

ಪಾಟ್ನಾ: ಮೂರು ವರ್ಷದ ಕಂದಮ್ಮನ ಮೇಲೆ 20ರ ಕಾಮುಕ ಚಿಕ್ಕಪ್ಪನೊಬ್ಬ ಅತ್ಯಾಚಾರ ಎಸಗಿದ್ದು, ಸದ್ಯ ಬಾಲಕಿ ಸ್ಥಿತಿ ಗಂಭೀರವಾಗಿರುವ ಅಮಾನವೀಯ ಘಟನೆ ಬಿಹಾರದ ತಾಕುರ್ಗಂಜ್ ಪ್ರದೇಶದಲ್ಲಿ ನಡೆದಿದೆ.

ಆರೋಪಿಯನ್ನು ಸಂತ್ರಸ್ತೆ ತಂದೆಯ ಸಹೋದರ ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸಂತ್ರಸ್ತೆ ಸ್ಥಿತಿ ತೀವ್ರ ಗಂಭೀರವಾಗಿದ್ದು, ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.


ನಡೆದಿದ್ದೇನು?
ಶುಕ್ರವಾರ ಮಧ್ಯಾಹ್ನ ಹೋಳಿ ಹಬ್ಬ ಆಚರಣೆ ನಡೆಯುತ್ತಿತ್ತು. ಈ ವೇಳೆ ತಂದೆಯ ಸಹೋದರ ಬಂದು ಬಾಲಕಿಗೆ ಹಬ್ಬದ ತಿಂಡಿ ಕೊಡಿಸುವ ನೆಪ ಹೇಳಿ ಕಟ್ಟಡವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಚಂದ್ರ ಯಾದವ್ ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿ ಬಳಿಕ ಕಾಣೆಯಾಗಿದ್ದಳು. ಆದರೆ ಸ್ವಲ್ಪ ಸಮಯದ ನಂತರ ನಿರ್ಮಾಣ ಹಂತದ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ನಂತರ ಕಟ್ಟಡದಿಂದ ಹೊರಬರುವಾಗ ಆರೋಪಿ ಚಿಕ್ಕಪ್ಪನನ್ನು ಸ್ಥಳೀಯರ ಗುಂಪೊಂದು ಬಂಧಿಸಿದ್ದು, ನಂತರ ಆರೋಪಿಯನ್ನು ನಮಗೆ ಒಪ್ಪಿಸಿದ್ದಾರೆ ಪೊಲೀಸರು ಹೇಳಿದರು.

ಸಂತ್ರಸ್ತೆಯ ತಂದೆ ಲಕ್ನೋ ನಗರ ನಿಗಮ್ ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದು, ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ಅನೇಕ ವರ್ಷಗಳಿಂದ ತಾಕುರ್ಗಂಜ್ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಘಟನೆಯಿಂದ ಗಂಭೀರವಾಗಿದ್ದ ಬಾಲಕಿಯನ್ನ ಲಕ್ನೋದಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜ್‍ಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕವೂ ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಎಂಬುದಾಗಿ ವರದಿಯಾಗಿದೆ.

ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *