ರೇಪಿಸ್ಟ್ ಬಾಬಾ ರಾಮ್ ರಹೀಂಗೆ 20 ವರ್ಷ ಜೈಲು ಶಿಕ್ಷೆ

ಪಂಚಕುಲಾ: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರೇಪಿಸ್ಟ್, ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ 20 ವರ್ಷ ಜೈಲು ಶಿಕ್ಷೆಯಾಗಿದೆ.

ರೋಹ್ತಕ್ ಜೈಲಿನಿಂದಲೇ ಸಂಜೆ 3.20ರ ವೇಳೆಗೆ ಬಾಬಾ ರಾಮ್ ರಹೀಂಗೆ ಶಿಕ್ಷೆ ಪ್ರಮಾಣವನ್ನು ನ್ಯಾಯಾಧೀಶ ಜಗದೀಪ್ ಸಿಂಗ್ ಪ್ರಕಟಿಸಿದರು.

ಬಾಬಾನಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ಪಂಚಕುಲಾದ ಸಿಬಿಐ ಕೋರ್ಟ್, 250 ಕಿಲೋಮೀಟರ್ ದೂರದ ರೋಹ್ಟಕ್‍ನ ಸೊನಾರಿಯಾ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಆಗಿತ್ತು. ನ್ಯಾಯಾಧೀಶ ಜಗದೀಪ್ ಸಿಂಗ್ ವಿಶೇಷ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ ಜೈಲಿಗೆ ಆಗಮಿಸಿದ್ದರು.

ರೋಹ್ಟಕ್ ಜೈಲಿನ ಸುತ್ತ ಏಳು ಸುತ್ತಿನ ಭದ್ರತಾ ವ್ಯವಸ್ಥೆ ನಿರ್ಮಾಣವಾಗಿತ್ತು. ಜೈಲಿನಿಂದ 10 ಕಿಲೋ ಮೀಟರ್ ದೂರದವರೆಗೂ 17 ಸಾವಿರಕ್ಕೂ ಹೆಚ್ಚು ಸೇನಾ ಹಾಗೂ ಅರೆಸೇನಾ ಭದ್ರತಾ ಸಿಬ್ಬಂದಿ, ಪೊಲೀಸರನ್ನು ನೇಮಿಸಲಾಗಿತ್ತು. ಜೈಲಿನ ಸುತ್ತಮುತ್ತಾ ನಿಷೇಧಾಜ್ಞೆ ಜಾರಿಯಾಗಿದ್ದು, ಜಿಲ್ಲಾಧಿಕಾರಿ ಅವರು ಕಂಡಲ್ಲಿ ಗುಂಡಿಗೆ ಆದೇಶ ನೀಡಿದ್ದರು.

ಹರಿಯಾಣದಾದ್ಯಂತ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಸೋನೆಪತ್ ಬಳಿ ಬಾಬಾ ಬೆಂಬಲಿಗರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಬಡಿಗೆ, ಕಬ್ಬಿಣದ ಸರಳು, ಚೈನು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಇದೂವರೆಗೂ 150ಕ್ಕೂ ಹೆಚ್ಚು ಬಾಬಾನ ಪುಂಡ ಭಕ್ತರನ್ನು ಬಂಧಿಸಿರುವ ಪೊಲೀಸರು ಸಿರ್ಸಾ ಆಶ್ರಮದೊಳಗೆ ಇನ್ನೂ 10 ಸಾವಿರ ಬಾಬಾ ಬೆಂಬಲಿಗರಿದ್ದು, 24 ಗಂಟೆಯೊಳಗೆ ಖಾಲಿ ಮಾಡುವಂತೆ ಖಡಕ್ ಸೂಚನೆ ಕೂಡ ನೀಡಲಾಗಿದೆ.

ಈ ಮಧ್ಯೆ ಹರಿಯಾಣ ಪಂಜಾಬ್ ಭದ್ರತೆ ಬಗ್ಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಚರ್ಚೆ ನಡೆಸಿದ್ದಾರೆ.

 

Comments

Leave a Reply

Your email address will not be published. Required fields are marked *