ಅಸಾರಾಂಗೆ ಜೀವವಾಧಿ ಶಿಕ್ಷೆ, ನನಗೆ ನ್ಯಾಯ ಸಿಕ್ತು: ಸಂತ್ರಸ್ತೆಯ ತಂದೆ

ಜೈಪುರ: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವವಾಧಿ ಶಿಕ್ಷೆ ಪ್ರಕಟವಾಗುತ್ತಿದಂತೆ ಸಂತ್ರಸ್ತ ಬಾಲಕಿಯ ತಂದೆ ತನಗೆ ನ್ಯಾಯ ದೊರಕಿದೆ ಎಂದು ಹೇಳಿದ್ದಾರೆ.

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಸತತ ಐದು ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಅಸಾರಾಂ ಬಾಪು ಹಾಗೂ ಪ್ರಕರಣದ ಇತರೇ ಆರೋಪಿಗಳಾದ ಶಿಲ್ಪಿ ಹಾಗೂ ಶರದ್ ತಪ್ಪಿಸ್ಥರು ಎಂದು ತೀರ್ಪು ನೀಡಿತ್ತು. ಬಳಿಕ ಪ್ರಮುಖ ಆರೋಪಿ ಅಸಾರಾಂ ಬಾಪು ಗೆ ಪೋಸ್ಕೋ ಕಾಯ್ದೆ ಅಡಿ ಅತಿ ಹೆಚ್ಚಿನ ಶಿಕ್ಷೆಯಾದ ಜೀವವಾಧಿ ಶಿಕ್ಷೆ ನೀಡಿದೆ. ಪ್ರಕರಣದ ಮತ್ತಿಬ್ಬರು ಅಪರಾಧಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಈ ವೇಳೆ ಪ್ರತಿಕ್ರಿಯೆ ನೀಡಿದ ಸಂತ್ರಸ್ಥೆಯ ತಂದೆ ನಮಗೆ ನ್ಯಾಯ ಸಿಕ್ಕಿದೆ. ಆರೋಪಿಗಳ ವಿರುದ್ಧ ಹೋರಾಟ ನಡೆಸಲು ಸಹಾಯ ಮಾಡಿದ ಎಲ್ಲರಿಗೂ ಋಣಿಯಾಗಿದ್ದೇನೆ. ಅಪರಾಧಿಗಳಿಗೆ ತಕ್ಕ ಶಿಕ್ಷೆ ಲಭಿಸಿದೆ. ಅಲ್ಲದೇ ಕೊಲೆ ಹಾಗೂ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿರುವ ಇತರರಿಗೆ ನ್ಯಾಯ ದೊರೆಯುವ ವಿಶ್ವಾಸವಿದೆ. ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

ಈ ಹಿಂದೆ ಪ್ರಕರಣದ ವಿಚಾರಣೆ ವೇಳೆ 9 ಸಾಕ್ಷಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ದಾಳಿಯಲ್ಲಿ ಮೂವರು ಸಾಕ್ಷಿಗಳು ಸಾವನ್ನಪ್ಪಿದರು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಂ 12 ಬಾರಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ತನ್ನ ವಕೀಲರ ಮೂಲಕ ಮನವಿ ಸಲ್ಲಿಸಿದ್ದ.

ಸದ್ಯ ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ಅಸಾರಾಂ ಪರ ವಕ್ತಾರ ನೀಲಂ ದುಬೇ, ಕೋರ್ಟ್ ತೀರ್ಪಿನ ಆದೇಶ ಪ್ರತಿ ಲಭಿಸಿದ ಬಳಿಕ ಮುಂದಿನ ಹೆಜ್ಜೆಯ ಕುರಿತು ತಿಳಿಸುತ್ತೆವೆ. ನಮಗೇ ನ್ಯಾಯಾಂಗ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *