ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ – ನೇಪಾಳ ಮೂಲದ ಆರೋಪಿ ಸೆರೆ

ಹಾಸನ: ನಗರದ (Hassan) ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿಯನ್ನು ಅರಸೀಕೆರೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳದ (Nepal) ಮೊರಾಂಗ್ ಜಿಲ್ಲೆಯ ಮೌಸಮ್ ಪಹಡಿ (25) ಬಂಧಿತ ಆರೋಪಿ. ಈತ ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ಕಳೆದ ಫೆ.13ರ ಬೆಳಗ್ಗೆ ಸಕಲೇಶಪುರದ ಕಡೆಯ ಯಾರ್ಡ್‌ನ ಟವರ್ ವ್ಯಾಗನ್ ಶೆಡ್‌ ಬಳಿ ಸುಮಾರು 40 ವರ್ಷದ ಅಪರಿಚಿತ ಮಹಿಳೆಯ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ರಾತ್ರೋರಾತ್ರಿ ಕೊಲೆ ಮಾಡಲಾಗಿತ್ತು. ನಿರ್ಮಾಣ ಹಂತದಲ್ಲಿರುವ ಶೆಡ್‌ನ ಆಯಿಲ್ & ಪೆಟ್ರೋಲ್ ಗೋದಾಮಿನ ರೂಮಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಸಿವಿಲ್ ಇಂಜಿನಿಯರ್ ಪವನ್ ಸಿ.ಎಂ. ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿ ಪತ್ತೆಗಾಗಿ ಬೆಂಗಳೂರು ರೈಲ್ವೇ ಎಸ್‌ಪಿ ಡಾ.ಸೌಮ್ಯಲತಾ, ರೈಲ್ವೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ಸತೀಶ್ ಕುಮಾರ್ ಅವರ ಮಾರ್ಗದರ್ಶನದ ಮೇಲೆ ಮೈಸೂರು ರೈಲ್ವೆ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಚೇತನ್.ವಿ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿತ್ತು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.