ಶಿವಮೊಗ್ಗ: ನವಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೋವಾ ತಂಡದ ವಿರುದ್ಧ ಕರ್ನಾಟಕ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ222 ರನ್ ಗಳಿಸಿದೆ.
ಮಳೆಯಿಂದಾಗಿ ಪಂದ್ಯ ತಡವಾಗಿ ಪ್ರಾರಂಭವಾಯಿತು. ಟಾಸ್ ಗೆದ್ದ ಗೋವಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮಳೆಯಿಂದ ಒದ್ದೆಯಾದ ಪಿಚ್ನ ಲಾಭ ಪಡೆದ ಗೋವಾ ಬೌಲರ್ಗಳು ಕರ್ನಾಟಕದ ಬ್ಯಾಟರ್ಗಳನ್ನು ಕಾಡಿದರು. 65 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ಕರ್ನಾಟಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕರಾದ ನಿಖಿನ್ ಜೋಸೆ ಹಾಗೂ ನಾಯಕ ಮಾಯಂಕ್ ಅರ್ಗವಾಲ್ ಜೋಡಿ ನಿಧಾನಗತಿಯಲ್ಲಿ ಬರುತ್ತಿದ್ದ ಚೆಂಡನ್ನು ಎದುರಿಸಲು ಪರದಾಡಿದರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ 3 ವಿಕೆಟ್ ಪಡೆದು ವಿಜೃಂಭಿಸಿದರು. ನಿಖಿನ್ (3), ಕೃಷ್ಣನ್ ಶ್ರೀಜಿತ್ (0), ಉತ್ತಮವಾಗಿ ಆಡುತ್ತಿದ್ದ ಅಭಿನವ್ ಮನೋಹರ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ನೆಲಕಚ್ಚಿ ಆಡಿದ ನಾಯಕ ಮಾಯಾಂಕ್ ಅರ್ಗವಾಲ್ 69 ಎಸೆತಗಳಲ್ಲಿ 28 ರನ್ ಗಳಿಸಿದ್ದಾಗ ವಾಸುಕಿ ಕೌಶಿಕ್ ಅವರಿಗೆ ವಿಕೆಟ್ ಒಪ್ಪಿಸಿದರು. ಐದನೇ ಕ್ರಮಾಂಕದಲ್ಲಿ ಆಡಲು ಬಂದ ಸಮರನ್ ರವಿಚಂದ್ರನ್ 3 ರನ್ ಗಳಿಸುವಷ್ಟರಲ್ಲಿ ಸುಸ್ತಾದರು.
ಶತಕದತ್ತ ಕರುಣ್ ನಾಯರ್: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೈಫಲ್ಯ ಕಂಡು ಹೊರಬಿದ್ದಿರುವ ಕರುಣ್ ನಾಯರ್ ದೇಶೀ ಟೂರ್ನಿಗಳಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. 138 ಎಸೆತಗಳಲ್ಲಿ 86 ರನ್ ಗಳಿಸಿದ್ದಾರೆ. ಶ್ರೇಯಸ್ ಗೋಪಾಲ್ 48 ರನ್ ಗಳಿಸಿದ್ದು, ಇಬ್ಬರೂ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಶ್ರೇಯಸ್ ಗೋಪಾಲ್ ಹಾಗೂ ಕರುಣ್ ನಾಯರ್ 94 ರನ್ಗಳ ಜೊತೆಯಾಟದಿಂದ ತಂಡವು ದಿಢೀರ್ ಕುಸಿತದಿಂದ ಚೇತರಿಸಿಕೊಂಡು, ದಿನದಾಂತ್ಯಕ್ಕೆ 222 ರನ್ ಗಳಿಸಿತು. ಗೋವಾ ಪರವಾಗಿ ಅರ್ಜುನ್ ತೆಂಡೊಲ್ಕರ್ 17 ಓವರ್ ಎಸೆದು 3 ವಿಕೆಟ್ ಪಡೆದರೆ, ಕೌಶಿಕ್ 18 ಓವರ್ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು.
ರಾತ್ರಿ ಮಳೆ ಬೀಳದೇ ಹೋದರೆ ನಾಳೆ ಕರ್ನಾಟಕ ತಂಡವು ರನ್ ಗಳಿಸಲು ಉತ್ತಮವಾದ ಅವಕಾಶ ಸಿಗುವ ಸಾಧ್ಯತೆಗಳಿವೆ. ಮೊದಲ ದಿನದಲ್ಲಿ 69 ಓವರ್ಗಳು ಮಾತ್ರ ಎಸೆಯಲು ಸಾಧ್ಯವಾಯಿತು. ಮಳೆಯಿಂದಾಗಿ ಪಂದ್ಯವು ನಿಗದಿತ ಅವಧಿಗಿಂತ ತಡವಾಗಿ ಆರಂಭವಾಯಿತು.
