ರಂಜನ್ ಗೊಗೋಯ್ ಪ್ರಮಾಣ ವಚನ: ದೇಶದ 46ನೇ ಸಿಜೆಐ ಬಗ್ಗೆ ಇಲ್ಲಿದೆ ಕಿರು ಮಾಹಿತಿ

ನವದೆಹಲಿ: ಸುಪ್ರೀಂ ಕೋರ್ಟ್ ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ರಂಜನ್ ಗೊಗೋಯ್‍ರವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಗೊಂಡಿದ್ದ ಜಸ್ಟಿಸ್ ರಂಜನ್ ಗೊಗೋಯ್‍ರವರಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣವಚನ ಕಾರ್ಯಕ್ರಮಕ್ಕೆ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಸೇರಿದಂತೆ ಸುಪ್ರೀಂ ಕೋರ್ಟ್ ನ ಬಹುತೇಕ ನ್ಯಾಯಾಧೀಶರು ಹಾಗೂ ಕೇಂದ್ರ ಸರ್ಕಾರದ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.

ಹಾಲಿ ಸಿಜೆಐ ಆಗಿರುವ ದೀಪಕ್ ಮಿಶ್ರಾರವರ ಅಧಿಕಾರವಧಿ ಪೂರ್ಣಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ರಂಜನ್ ಗೊಗೋಯ್‍ರವರನ್ನು ಆಯ್ಕೆಮಾಡಲಾಗಿತ್ತು. 63 ವರ್ಷದ ರಂಜನ್ ಗೊಗೋಯ್ ಈ ಸ್ಥಾನವನ್ನು ಏರಿದ ಈಶಾನ್ಯ ಭಾರತದ ಪ್ರಥಮ ನ್ಯಾಯಾಧೀಶ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1954 ರ ನವೆಂಬರ್ 18 ರಂದು ಜನಿಸಿದ್ದ ರಂಜನ್ ಗೊಗೋಯ್, 1978 ರಲ್ಲಿ ಬಾರ್ ಕೌನ್ಸಿಲ್‍ಗೆ ಸೇರಿ, ಗುವಾಹಟಿ ಹೈಕೋರ್ಟ್ ವಕೀಲರಾಗಿ ಕೆಲಸ ಮಾಡಿದ್ದರು. 2001 ರ ಫೆಬ್ರವರಿ 28 ರಂದು ಗುವಾಹಟಿ ಹೈ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಇದಾದ 9 ವರ್ಷಗಳ ಬಳಿಕ 2011 ರ ಫೆಬ್ರವರಿ 12 ರಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಯಾದರು. 2012 ರ ಏಪ್ರಿಲ್ 23 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

ರಂಜನ್ ಗೊಗೋಯ್ ಅತಿ ಕಡಿಮೆ ಅವಧಿಗಳ ಕಾಲ ಮುಖ್ಯ ನ್ಯಾಯಾಧೀಶರಾಗಿ ಕೆಲಸ ಮಾಡಲಿದ್ದಾರೆ. ಒಟ್ಟು 13 ತಿಂಗಳು ಕಾಲ ಸೇವೆ ಸಲ್ಲಿಸಲಿದ್ದು, 2019ರ ನವೆಂಬರ್ 17ರಂದು ನಿವೃತ್ತಿಯಾಗಲಿದ್ದಾರೆ. ರಂಜನ್ ಗೊಗೋಯ್ ಅವರ ತಂದೆ ಕೇಶಬ್ ಚಂದ್ರ ಗೊಗೋಯ್ ಕಾಂಗ್ರೆಸ್ ನಾಯಕರಾಗಿದ್ದು 1982 ರಲ್ಲಿ ಅಸ್ಸಾಂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *