ಬ್ಯಾಟಿಂಗ್, ಕೀಪಿಂಗ್ ಆಯ್ತು ಈಗ ಪಿಚ್ ಕೆಲಸಕ್ಕೂ ಸೈ – ರೋಲರ್ ಓಡಿಸಿದ ಕ್ಯಾಪ್ಟನ್ ಕೂಲ್

ರಾಂಚಿ: ಭಾರತ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ ಅವರು ಸ್ಟೇಡಿಯಂನಲ್ಲಿ ಪಿಚ್ ರೋಲರ್ ಡ್ರೈವ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

2019 ವಿಶ್ವಕಪ್‍ನ ನಂತರ ಕ್ರಿಕೆಟ್‍ನಿಂದ ಕೊಂಚ ದೂರ ಉಳಿದಿರುವ ಧೋನಿ ಅವರು, ತನ್ನ ಹುಟ್ಟೂರು ರಾಂಚಿಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಿಚ್ ಅನ್ನು ಸಮತಟ್ಟಾಗಿಸಲು ಇರುವ ಪಿಚ್ ರೋಲರ್ ವಾಹನವನ್ನು ಓಡಿಸಿದ್ದಾರೆ. ಇದನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಧೋನಿ ಸರಳತೆಗೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.

ಧೋನಿ ಅವರ ಫ್ಯಾನ್ಸ್ ಪೇಜ್‍ವೊಂದು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, 12 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಧೋನಿ ಅವರು, ಪಿಚ್ ರೋಲರ್ ಅನ್ನು ಹಿಂದಕ್ಕೆ ಮುಂದಕ್ಕೆ ಓಡಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಅವರ ಫ್ಯಾನ್ಸ್ ಪೇಜ್ ಒನ್ ಮ್ಯಾನ್ ಡಿಫರೆಂಟ್ ರೋಲ್ಸ್ ಎಂದು ಬರೆದುಕೊಂಡಿದ್ದಾರೆ. ಧೋನಿ ಅವರು ರಾಂಚಿ ಮೈದಾನದಲ್ಲಿ ದಿನ ಕಾಣಿಸಿಕೊಳ್ಳುತ್ತಿದ್ದು, ರಣಜಿ ಆಟಗಾರರ ಜೊತೆ ಅಭ್ಯಾಸ ಮಾಡುತ್ತಿದ್ದಾರೆ.

ಮಾರ್ಚ್‍ನಲ್ಲಿ ಆರಂಭವಾಗುವ ಐಪಿಎಲ್ ಅಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಚೆನ್ನೈ ತಂಡದ ಸಿಇಓ ವಿಶ್ವನಾಥನ್, ಧೋನಿ ಅವರು ಮಾರ್ಚ್ 3 ರಂದು ಚೆನ್ನೈಗೆ ಬರಲಿದ್ದಾರೆ. ನಂತರ ಅವರು ಮಾರ್ಚ್ ಮೂರರಿಂದ ಎಂ.ಎ ಚಿದಂಬರಂ ಮೈದಾನದಲ್ಲಿ ಸುರೇಶ್ ರೈನಾ ಅವರ ಜೊತೆಗೆ ಅಭ್ಯಾಸ ಮಾಡಲಿದ್ದಾರೆ. ಈ ಇಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಅಂತರಾಷ್ಟ್ರೀಯ ಆಟಗಾರರು ಬರುತ್ತಿಲ್ಲ ಎಂದು ಮಾಹಿತಿ ನೀಡಿದ್ದರು.

2019 ರ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತ ನಂತರ ಧೋನಿ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮಾರ್ಚ್ ನಲ್ಲಿ ಆರಂಭವಾಗುತ್ತಿರುವ ಐಪಿಲ್‍ನಲ್ಲಿ ಅವರನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *