– ತಂದೆ, ಸಹೋದರಿಯ ಖಾತೆಗೆ ಹಣ ವರ್ಗಾವಣೆ
– ಜನರಿಗೆ ವಂಚನೆ ಮಾಡಲೆಂದೇ ದೇಣಿಗೆ ಸಂಗ್ರಹ
ನವದೆಹಲಿ: ಕೋವಿಡ್(Covid) ಪರಿಹಾರಕ್ಕಾಗಿ ಮೂರು ಅಭಿಯಾನಗಳಿಂದ 2.69 ಕೋಟಿ ರೂ. ಹಣವನ್ನು ಸಂಗ್ರಹಿಸಿ ಅದನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ED) ಪತ್ರಕರ್ತೆ ರಾಣಾ ಅಯ್ಯೂಬ್(Rana Ayyub) ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.
ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಕಪ್ಪುಹಣ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಕೇಸ್ ದಾಖಲಿಸಿ ತನಿಖೆ ನಡೆಸಿದ ಇಡಿ ಇಂದು ಉತ್ತರಪ್ರದೇಶದ ಗಾಜೀಯಾಬಾದ್‌ನಲ್ಲಿರುವ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಒಟ್ಟು ಸಂಗ್ರಹವಾದ 2,69,44,680 ರೂ. ಹಣದಲ್ಲಿ ಕೇವಲ 29 ಲಕ್ಷ ರೂ. ಮಾತ್ರ ಪರಿಹಾರ ನಿಧಿಗೆ ಬಳಕೆಯಾಗಿದ್ದು ಉಳಿದ ಹಣ ಬಳಕೆಯಾಗಿಲ್ಲ ಎಂದು ಉಲ್ಲೇಖಿಸಿದೆ.

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅಯ್ಯೂಬ್ ಅವರು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ(FCRA) ಅಡಿಯಲ್ಲಿ ನೋಂದಣಿ ಮಾಡದೇ ವಿದೇಶದಿಂದ ದೇಣಿಗೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಗ್ರಹವಾದ ಹಣವನ್ನು ತಂದೆ ಮತ್ತು ಸಹೋದರಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ಪೈಕಿ 50 ಲಕ್ಷ ರೂ. ಹಣವನ್ನು ಎಫ್‌ಡಿ ಇಟ್ಟರೆ, 50 ಲಕ್ಷ ರೂ. ಹಣವನ್ನು ಹೊಸದಾಗಿ ತೆರೆದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪರಿಹಾರ ಕಾರ್ಯಕ್ಕೆ ಕೇವಲ 29 ಲಕ್ಷ ರೂಪಾಯಿ ಬಳಸಲಾಗಿದೆ. ಅಷ್ಟೇ ಅಲ್ಲದೇ ಪರಿಹಾರ ಕೆಲಸಕ್ಕೆ ಹೆಚ್ಚಿನ ವೆಚ್ಚ ಪಡೆಯಲು ಅಯ್ಯೂಬ್ ನಕಲಿ ಬಿಲ್ ಸಲ್ಲಿಸಿದ್ದಾರೆ ಎಂದು ಇಡಿ ಹೇಳಿದೆ.
ತನ್ನ ವೈಯಕ್ತಿಕ ವಿಮಾನ ಪ್ರಯಾಣದ ಟಿಕೆಟ್ ದರವನ್ನು ಪರಿಹಾರ ಕಾರ್ಯದ ವೆಚ್ಚಕ್ಕೆ ಅಯ್ಯೂಬ್ ಸೇರಿಸಿದ್ದಾರೆ. ಜನರಿಂದ ಹಣವನ್ನು ಸಂಗ್ರಹಿಸಿ ವಂಚನೆ ಮಾಡಲೆಂದೇ ರಾಣಾ ಅಯ್ಯೂಬ್ ದೇಣಿಗೆ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದರು ಎಂದು ಇಡಿ ಆರೋಪಿಸಿದೆ.
ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್-‘ಕೆಟ್ಟೋ’ದಲ್ಲಿಏಪ್ರಿಲ್ 2020 ರಿಂದ ನಿಧಿ ಸಂಗ್ರಹ ಅಯ್ಯೂಬ್ ಅಭಿಯಾನವನ್ನು ಪ್ರಾರಂಭಿಸಿದ್ದರು. ಕೊಳೆಗೇರಿ ನಿವಾಸಿಗಳು ಮತ್ತು ರೈತರಿಗೆ ನಿಧಿ ಸಂಗ್ರಹಿಸಲು ಸಹಾಯ, ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಪರಿಹಾರ ಕಾರ್ಯ, ಭಾರತದಲ್ಲಿ ಕೋವಿಡ್ 19 ನಿಂದ ಸಂತೃಸ್ತರಾದವರಿಗೆ ಸಹಾಯ ಮಾಡಲು ಅಯ್ಯೂಬ್ ನಿಧಿ ಸಂಗ್ರಹ ಮಾಡಿದ್ದರು.

Leave a Reply