ಶಾರುಖ್ ಖಾನ್ ಪುತ್ರನ ಬಂಧನ- ರಮ್ಯಾಗೆ ಅನುಮಾನ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರನ ಬಂಧನದ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಇದೇ ವಿಚಾರವಾಗಿ ಇದೀಗ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಆರ್ಯನ್ ಖಾನ್ ಬಂಧನದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿರುವ ಅವರು, ಆರ್ಯನ್ ಖಾನ್ ಬಳಿ ಡ್ರಗ್ಸ್ ಇರಲಿಲ್ಲ, ಡ್ರಗ್ಸ್ ಸೇವಿಸಿದ ಬಗ್ಗೆ ದಾಖಲೆ ಇಲ್ಲ. ಆದರೂ ಬಂಧಿಸಲಾಗಿದೆ. ಮತ್ತೊಂದೆಡೆ ಬಿಜೆಪಿ ಸಚಿವರ ಮಗ 4 ರೈತರನ್ನು ಕೊಂದಿದ್ದಾರೆ. ಅವರ ಬಂಧನ ಯಾಕಿಲ್ಲ? ಅಲ್ಲದೆ ಮೃತ ರೈತರ ಕುಟುಂಬದವರನ್ನು ಭೇಟಿ ಮಾಡಲು ಹೊರಟಾಗ ಯಾವುದೇ ನೋಟಿಸ್ ಅಥವಾ ಮುನ್ಸೂಚನೆ ಇಲ್ಲದೆ ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆದಿರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟಿಕೆಯಿಂದ ದೇಶ ನಡೆಯುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಕಿಂಗ್ ಖಾನ್ ಮಗನ ಡ್ರಗ್ಸ್ ಪ್ರಕರಣದಲ್ಲಿ ಕನ್ನಡಿಗನ ವಕಾಲತ್ತು

ಆರ್ಯನ್ ಖಾನ್ ಬಳಿ ಮಾದಕ ವಸ್ತು ಇದೆ, ಡ್ರಗ್ಸ್ ಸೇವಿದ್ದಾನೆ ಎಂದು ಎನ್‍ಸಿಬಿ ಎಲ್ಲೂ ಹೇಳಿಲ್ಲ. ಆದರೂ ಕಸ್ಟಡಿಗೆ ಪಡೆಯಲಾಗಿದೆ. ಎನ್‍ಸಿಬಿ ಆಯೋಜಕರಿಗೆ ಸುಲಭವಾಗಿ ವಾರೆಂಟ್ ಜಾರಿ ಮಾಡಬಹುದು, ವಿಚಾರಣೆಗೆ ಕರೆಯಬಹುದು. ಆದರೂ ಈ ವರೆಗೆ ಅದನ್ನು ಯಾಕೆ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಯಾಬ್ ಕಿರಿಕ್‍ಗೆ ನಟಿ ಸಂಜನಾ ಗಲ್ರಾನಿ ಸ್ಪಷ್ಟನೆ

ನ್ಯಾಯಾಲಯದಲ್ಲಿ ವಾಟ್ಸಪ್ ಚಾಟ್‍ಗಳನ್ನು ಪುರಾವೆಯಾಗಿ ಪರಿಗಣಿಸುವುದಿಲ್ಲ. ವಿಚಾರಣೆ ವೇಳೆ ಆರ್ಯನ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳುತ್ತಾರೆ. ಇದು ಸತ್ಯವಲ್ಲ, ಏಕೆಂದರೆ ಆರ್ಯನ್ ಒಪ್ಪಿಕೊಂಡಿರುವ ಕುರಿತು ಎಲ್ಲೂ ಬಹಿರಂಗವಾಗಿ ಹೇಳಿಲ್ಲ. ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಎನ್‍ಸಿಬಿ ಹೇಳುತ್ತಿದೆ. ಇದು ನಿಜವೇ ಆಗಿದ್ದರೆ ಎನ್‍ಸಿಬಿ ಕಾನೂನನ್ನು ಉಲ್ಲಂಘಿಸಿದಂತೆ. ಅಲ್ಲದೆ ವಿಚಾರಣೆ ವೇಳೆ ದೀಪಿಕಾ ಪಡುಕೋಣೆ ಸಾಕಷ್ಟು ಬಾರಿ ಅತ್ತರು, ಆರ್ಯನ್ ಖಾನ್ ಅತ್ತಿದ್ದಾರೆ ಎಂಬ ಗಾಸಿಪ್ ಹರಡೋದು ಅವರಿಗೆ ಇಷ್ಟ ಎನಿಸುತ್ತದೆ. ವಿಚಾರಣೆ ವೇಳೆ ಅಧಿಕಾರಿಗಳನ್ನು ಹೊರತುಪಡಿಸಿ ಯಾರೂ ಇರುವುದಿಲ್ಲ. ಆದಾಗ್ಯೂ ಇದು ಮಾಧ್ಯಮಗಳಿಗೆ ಹೇಗೆ ಸಿಗುತ್ತದೆ ಎಂದು ರಮ್ಯಾ ಪ್ರಶ್ನಿಸಿದ್ದಾರೆ. ಈ ಮೂಲಕ ರಮ್ಯಾ ಆರ್ಯನ್ ಖಾನ್ ಪರ ಬ್ಯಾಟ್ ಬೀಸಿದ್ದು, ಎನ್‍ಸಿಬಿ ವಿರುದ್ಧ ಹರಿಹಾಯ್ದಿದ್ದಾರೆ.

Comments

Leave a Reply

Your email address will not be published. Required fields are marked *