ಒಂದು ವಾರದ ಬಳಿಕ ರಾಮೇಶ್ವರಂ ಕೆಫೆ ರೀ ಓಪನ್‌

– ಮಹಾಶಿವರಾತ್ರಿ ಹಿನ್ನೆಲೆ ಕೆಫೆಯಲ್ಲಿ ಇಂದು ಪೂಜೆ

ಬೆಂಗಳೂರು: ಬಾಂಬ್ ‌ಸ್ಫೋಟದಿಂದಾಗಿ ಮುಚ್ಚಲ್ಪಟ್ಟಿದ್ದ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆ (Rameshwaram Cafe) ಒಂದು ವಾರದ ಬಳಿಕ ರೀ ಓಪನ್‌ ಆಗುತ್ತಿದೆ. ಮಹಾಶಿವರಾತ್ರಿ ದಿನವಾದ ಇಂದು (ಶುಕ್ರವಾರ) ಕೆಫೆ ಮತ್ತೆ ತೆರೆಯುತ್ತಿದೆ.

ರೀ ಓಪನ್‌ಗೆ ಸಿದ್ಧವಾಗಿರುವ ಕೆಫೆಯನ್ನು ಸಿಬ್ಬಂದಿ ತಳಿರು ತೋರಣಗಳಿಂದ ಅಲಂಕರಿಸಿದ್ದಾರೆ. ಕೆಫೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಜರುಗಲಿವೆ. ಪೊಲೀಸ್ ಪಹರೆಯಲ್ಲೇ ಇಂದು ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಾಳೆಯಿಂದ (ಶನಿವಾರ) ಗ್ರಾಹಕರಿಗೆ ಸೇವೆ ಆರಂಭವಾಗಲಿದೆ. ಇದನ್ನೂ ಓದಿ: ಹೂಡಿಯ ಪ್ರಾರ್ಥನಾ ಮಂದಿರದ ಬಳಿ ಬಟ್ಟೆ ಬದಲಾಯಿಸಿ ಟೋಪಿ ಬಿಟ್ಟು ಹೋದ ಬಾಂಬರ್‌

ಮಾಲೀಕರು ಈಗಾಗಲೇ ಕೆಫೆಯನ್ನು ಆಲ್ಟ್ರೇಷನ್ ಮಾಡಿಸಿದ್ದಾರೆ. ಕೆಫೆಯ ಪ್ರವೇಶ ದ್ವಾರದಲ್ಲಿ ಎರಡು ಮೆಟಲ್ ಡಿಟೆಕ್ಟರ್ ಅಳವಡಿಕೆ ಸಿಸ್ಟಮ್ ‌ಅಳವಡಿಸಲಾಗಿದೆ. ಪ್ರತಿಯೊಬ್ಬ ಗ್ರಾಹಕರನ್ನು ಹ್ಯಾಂಡ್ ಡಿಟೆಕ್ಟರ್ ಮೂಲಕ ಪರೀಕ್ಷಿಸಿ ಸಿಬ್ಬಂದಿ ಪ್ರವೇಶಕ್ಕೆ ಅನುವು ಮಾಡಿಕೊಡಲಿದ್ದಾರೆ. ಬಾಂಬ್‌ ಸ್ಫೋಟ ಪ್ರಕರಣದಿಂದ ಎಚ್ಚೆತ್ತು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಳೆದ ಶುಕ್ರವಾರ (ಮಾ.1)ದಂದು ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಾಗಿದ್ದು, ಶಂಕಿತ ಉಗ್ರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸಿಸಿಬಿಯಿಂದ ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ