ಆಪರೇಷನ್ ಕಮಲ ಪ್ಲ್ಯಾನ್ ಕೇಳಿ ಬಿಎಸ್‍ವೈ ಶಾಕ್- 14 ತಿಂಗಳ ರಹಸ್ಯ ಬಿಚ್ಚಿಟ್ಟ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನದ ಒಂದೊಂದೇ ರಹಸ್ಯಗಳು ಈಗ ಹೊರಬೀಳುತ್ತಿದೆ. ಅನರ್ಹತೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದು, ಅನರ್ಹ ಶಾಸಕರೆಲ್ಲರೂ ಬಿಜೆಪಿ ಸೇರಿದ್ದ ಬೆನ್ನಲ್ಲೇ ಕೆಲವೊಂದು ಸ್ಫೋಟಕ ಸತ್ಯಾಂಶಗಳು ಬಯಲಾಗಿವೆ.

ಬಿಜೆಪಿ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಗೋಕಾಕ್‍ಗೆ ಭೇಟಿಕೊಟ್ಟ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಇಂಚಿಂಚು ಮಾಹಿತಿಯನ್ನು ಸಾರ್ವಜನಿಕ ಸಭೆಯಲ್ಲಿ ಹೊರ ಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮೇಲಿನ ಸಿಟ್ಟೇ ಮೈತ್ರಿ ಸರ್ಕಾರ ಉರುಳಲು ಕಾರಣ ಅನ್ನೋ ಸತ್ಯವನ್ನು ಹೊರಹಾಕಿದ್ದಾರೆ.

ಜಾರಕಿಹೊಳಿ ಬಿಚ್ಚಿಟ್ಟ ಸತ್ಯಗಳೇನು?
2018ರ ಫಲಿತಾಂಶ ಬರುತ್ತಿದ್ದಂತೆ ಸಿದ್ದು ಸೈಡ್‍ಲೈನ್ ಆಗಿ ಡಿಕೆ ಶಿವಕುಮಾರ್ ಹಿಡಿತಕ್ಕೆ ಕಾಂಗ್ರೆಸ್ ಬಂತು. ಮೇ 15ಕ್ಕೆ ಸರ್ಕಾರ ಪತನಕ್ಕೆ ಶಂಕರ್ ಜೊತೆ ಸೇರಿ ಮುಹೂರ್ತ ಫಿಕ್ಸ್ ಆಯ್ತು. ಇದರ ಜೊತೆ ತನ್ನನ್ನು ಸಂಪುಟದಿಂದ ಕೈಬಿಟ್ಟು ಸತೀಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿದ್ದು ಕೂಡ ಜಾರಕಿಹೊಳಿ ಸಿಟ್ಟಿಗೆ ಕಾರಣವಾಯಿತು.

ಬಿಎಸ್‍ವೈ ಮೊದಲು ಭೇಟಿಯಾಗಿದ್ದ ಜಾರಕಿಹೊಳಿ, ಶಂಕರ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯಡಿಯೂರಪ್ಪನವರಿಗೆ ರಮೇಶ್ ಜಾರಕಿಹೊಳಿ ಅವರ ಮೇಲೆ ನಂಬಿಕೆ ಇರಲಿಲ್ಲ. ಅಲ್ಲದೇ ನಿಮ್ಮನ್ನು ನಂಬಹುದೇ ಎಂದು ಪ್ರಶ್ನಿಸಿದ್ದರು. ಇದು ಬೇಡ ಎಂದು ಶೆಟ್ಟರ್ ಹಾಗೂ ಬಿಎಸ್‍ವೈ ಹೇಳಿದ್ದರು. ಅಲ್ಲದೇ ಆಪರೇಷನ್ ಪ್ಲಾನ್ ಹೇಳಿದ ಸಂದರ್ಭದಲ್ಲಿ ಅವರು ಒಪ್ಪಿರಲಿಲ್ಲ

ಬಿಎಸ್‍ವೈ ನಿರಾಕರಿಸಿದರೂ ಮತ್ತೆ ಮಾತುಕತೆ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರು ಮುಳುಗಲಿ, ತೇಲಲಿ ನನ್ನನ್ನು ನಂಬಿ ಎಂದು ಕಷ್ಟಪಟ್ಟು ಒಪ್ಪಿಸಿದ್ದರು. ಅಲ್ಲದೇ ಹೈದ್ರಾಬಾದ್‍ನಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಆಪರೇಷನ್ ಕಮಲದ ಬಗ್ಗೆ ಮೊದಲ ಬಾರಿ ಚರ್ಚೆ ನಡೆಸಿದ್ದರು. ಆ ವೇಳೆ ಬಿಎಸ್‍ವೈ ಸಿಎಂ ಆಗಬೇಕು ಎಂಬ ಷರತ್ತು ವಿಧಿಸಿ ಒಪ್ಪಿಗೆ ಸೂಚಿಸಿದ್ದರು. ಮೇ 15, 2018ಕ್ಕೆ ಮಾಡಿದ್ದ ಆಪರೇಷನ್ ಪ್ಲಾನ್ 2019 ಜು.23 ರಂದು ಪೂರ್ಣಗೊಂಡಿತ್ತು.

Comments

Leave a Reply

Your email address will not be published. Required fields are marked *