ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ಗಂಡಸಲ್ಲ, ಶೀಘ್ರವೇ ರಾಜೀನಾಮೆ – ರಮೇಶ್ ಜಾರಕಿಹೊಳಿ

ಬೆಳಗಾವಿ: ನಾನು ರಾಜೀನಾಮೆ ನೀಡುವುದು ಖಚಿತ. ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ನನಗೆ ಜವಾಬ್ದಾರಿ ಗೊತ್ತಿದೆ. ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ನಾನಲ್ಲ. ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಮತದಾನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಒಳ್ಳೆಯದಾಗಲಿ ಎಂದು ಮತದಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನೋಡೋಣ. ತಾಂತ್ರಿಕವಾಗಿಯಷ್ಟೇ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಾನು ರಾಜೀನಾಮೆ ಕೊಡುವುದನ್ನು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

ಒಬ್ಬ ಸೀನಿಯರ್ ಶಾಸಕನಾಗಿ ಬೇಜವಾಬ್ದಾರಿಯುವ ವ್ಯಕ್ತಿಯಾಗಿರುವ ಸತೀಶ್ ಜಾರಕಿಹೊಳಿ ತಲೆಕೆಟ್ಟಂತೆ ಮಾತನಾಡಬಾರದು. 5 ಬಾರಿ ಶಾಸಕನಾಗಿರುವ ನಾನು ಜವಾಬ್ದಾರಿಯಿಂದ ಮಾತನಾಡುತ್ತಿದ್ದೇನೆ ಎಂದು ಸಹೋದರನ ವಿರುದ್ಧ ವಾಗ್ದಾಳಿ ನಡೆಸಿದರು.

ಲಖನ್ ಜಾರಕಿಹೊಳಿ ಎಲ್ಲೇ ನಿಂತರೂ ನನ್ನ ಬೆಂಬಲವಿದೆ. ಈ ಹಿಂದೆ ಸತೀಶ್ ಜಾರಕಿಹೊಳಿ ಓರ್ವ ಸಹೋದರರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದು ಹಾಳು ಮಾಡಿದ್ದಾರೆ. ಈಗ ಲಖನ್ ಸರದಿ. ಬೇರೆ ಪಕ್ಷದಿಂದ ಬಂದ ಜನರು ಮೂಲ ಕಾಂಗ್ರೆಸ್ಸಿಗರಿಗೆ ತೊಂದರೆ ಕೊಡುತ್ತಿದ್ದಾರೆ. ಸತೀಶ್ ಜನತಾ ದಳದಿಂದ ಬಂದವರು ಎಂಬ ಅರ್ಥದಲ್ಲಿ ರಮೇಶ್ ಈ ಹೇಳಿಕೆ ನೀಡಿದ್ದಾರೆ.

ಬಿಎಸ್‍ವೈಗೆ ಶ್ಲಾಘನೆ:
ರಮೇಶ್ ಕತ್ತಿ ಟಿಕೆಟ್ ಕೈ ತಪ್ಪಿ ಮುನಿಸಿಕೊಂಡಾಗ ಯಡಿಯೂರಪ್ಪ ಅವರು ನಾಲ್ಕೈದು ಗಂಟೆಗಳಲ್ಲಿ ಬೆಳಗಾವಿಗೆ ಬಂದು ಸಮಾಧಾನಪಡಿಸಿದರು. ಆದರೆ ಇಲ್ಲಿಯವರೆಗೂ ನನ್ನನ್ನು ಕಾಂಗ್ರೆಸ್ ಪಕ್ಷದವರು ಮಾತನಾಡಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕಾರ್ಯವನ್ನು ರಮೇಶ್ ಜಾರಕಿಹೊಳಿ ಶ್ಲಾಘಿಸಿದರು.

Comments

Leave a Reply

Your email address will not be published. Required fields are marked *