ರಾಜೀನಾಮೆಗೆ ಮುನ್ನವೇ ಅಖಾಡಕ್ಕಿಳಿದ ಬೆಳಗಾವಿ ಸಾಹುಕಾರ

-ಸೋದರನ ಕ್ಷೇತ್ರದ ಮೇಲೆಯೇ ಕಣ್ಣಿಟ್ಟ ರಮೇಶ್ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಖಾಡಕ್ಕಿಳಿದಿದ್ದು, ಚುನಾವಣೆಯ ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಸಹೋದರ ಸತೀಶ್ ಜಾರಕಿಹೊಳಿಯನ್ನು ಮಣಿಸಲು ಈಗಿನಿಂದಲೇ ರಮೇಶ್ ಜಾರಕಿಹೊಳಿ ಸನ್ನದ್ಧಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇಂದು ಕೆಎಂಎಫ್ ನಿರ್ದೇಶಕರ ಸಭೆಯ ಮುಕ್ತಾಯದ ಬಳಿಕ ಸತೀಶ್ ಜಾರಕಿಹೊಳಿಯ ಯಮಕನಮರಡಿ ಕ್ಷೇತ್ರದ ಬಿಜೆಪಿ ಪ್ರಮುಖ ಮುಖಂಡರ ಜೊತೆಗೆ ರಮೇಶ್ ಜಾರಕಿಹೊಳಿ ನಗರದ ಖಾಸಗಿ ಹೋಟೆಲಿನಲ್ಲಿ ರಹಸ್ಯ ಸಭೆಯೊಂದನ್ನು ನಡೆಸಿದ್ದಾರೆ. ಸಭೆಯಲ್ಲಿ ಬಿಜೆಪಿ ಮುಖಂಡರ ಮುಂದೆ ಸತೀಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿಯೇ ಮಾತನಾಡಿ, ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಮೇ 23ಕ್ಕೆ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು, ನಮ್ಮ ಜತೆಗೆ ನಾಲ್ಕು ಜನ ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ಬಳಿಕ ಗೋಕಾಕ್ ನಿಂದ ಸ್ಪರ್ಧೆ ಮಾಡಲಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಸೋದರ ಸತೀಶ್ ಜಾರಕಿಹೊಳಿ ಸ್ವಕ್ಷೇತ್ರ ಯಮಕನಕರಡಿಯಲ್ಲಿಯೇ ಸ್ಪರ್ಧೆ ಮಾಡಲಿದ್ದೇನೆ. ಈಗಿನಿಂದಲೇ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠಗೊಳಿಸಲು ಎಲ್ಲರೂ ಕೆಲಸ ಮಾಡಬೇಕಿದೆ. ಕ್ಷೇತ್ರದಲ್ಲಿ ಯಾರಿಗೂ ಹೆದರದಂತೆ ಕಾರ್ಯಕರ್ತರಿಗೆ ರಮೇಶ್ ಜಾರಕಿಹೊಳಿ ಧೈರ್ಯ ತುಂಬಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *