ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ್ ಬೆಂಗಳೂರಿಗೆ ವಾಪಸ್

ಬೆಂಗಳೂರು: ಅನರ್ಹಗೊಂಡಿರುವ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಶ್ರೀಮಂತ್ ಪಾಟೀಲ್ ಇಬ್ಬರು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಸುಪ್ರೀಂಕೋರ್ಟಿನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಯಾವಾಗ ವಾದ ಮಾಡಬೇಕು ಎಂಬುದನ್ನ ನಮ್ಮ ವಕೀಲರು ತೀರ್ಮಾನ ಮಾಡಲಿದ್ದಾರೆ. ನ್ಯಾಯಾಲಯದಲ್ಲಿರುವ ಕಾರಣ ಜಾಸ್ತಿ ಏನೂ ಮಾತನಾಡುವುದು ಬೇಡ. ಅವರು ಯಾರು ಮಾಡಿದ್ದಾರೋ ಅವರಿಗೆ ಒಳ್ಳೆಯದಾಗಲಿ ಎಂದರು.

ಹಿಂದಿನ ಪ್ರಕರಣಗಳು ನಮ್ಮ ಪ್ರಕರಣಗಳಿಗೆ ತಾಳೆ ಮಾಡುವುದು ಬೇಡ. ನಾವು ಮೊದಲೇ ರಾಜೀನಾಮೆ ಕೊಟ್ಟಿದ್ದೇವೆ. ಅದಾದ ನಂತರ ದುರದ್ದೇಶದಿಂದ ಅನರ್ಹತೆ ಮಾಡಿದ್ದಾರೆ. ನಮ್ಮ ನ್ಯಾಯಾಂಗದ ಮೇಲೆ ಬಹಳಷ್ಟು ಭರವಸೆ ಇದೆ. ನಮಗೆ ನ್ಯಾಯ ಸಿಕ್ಕೆ ಸಿಗುತ್ತದೆ. ಸ್ಪೀಕರ್ ಅವರ ಬಗ್ಗೆ ಮಾತನಾಡುವುದು ಬೇಡ, ಆತ ಒಳ್ಳೆಯ ಮನುಷ್ಯ. ಸ್ಪೀಕರ್ ಯಾಕೆ ಹಾಗೆ ಮಾಡಿದ್ದಾರೋ ಗೊತ್ತಿಲ್ಲ. ಸ್ಪೀಕರ್‌ಗೆ ದೇವರು ಒಳ್ಳೆಯದು ಮಾಡಲಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ನಾಪತ್ತೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೂ ಈಗ ವಿಚಾರ ಗೊತ್ತಾಯಿತು. ನಮ್ಮ ಗುರುಗಳಾದ ಎಸ್.ಎಂ.ಕೃಷ್ಣ ಅವರ ಮನೆಗೆ ಹೋಗಿ ಭೇಟಿ ಮಾಡುತ್ತೇನೆ. ಶೀಘ್ರದಲ್ಲಿ ನಾವು 15 ಮಂದಿ ಕೂಡಿ ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಚಾರವನ್ನು ತಿಳಿಸುವುದಾಗಿ ರಮೇಶ್ ಹೇಳಿದರು.

ಇತ್ತ ಶ್ರೀಮಂತ್ ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಸಂಜೆ ಬೆಂಗಳೂರಿನಲ್ಲಿ ಮಾತನಾಡುವುದಾಗಿ ತಿಳಿಸಿ ಬೆಂಗಳೂರು ಕಡೆಗೆ ಪಯಣ ಬೆಳೆಸಿದರು.

Comments

Leave a Reply

Your email address will not be published. Required fields are marked *