ನಿರ್ಗತಿಕರಿಗೆ ಉಚಿತವಾಗಿ ಅಗತ್ಯ ವಸ್ತುಗಳ ವಿತರಣೆ – ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯ್ತಿ

ರಾಮನಗರ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ದೇಶವೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ನಿರ್ಗತಿಕರು, ಬಡವರು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಪಂಚಾಯ್ತಿ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.

ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದ ಪಿಡಿಓ ಯತೀಶ್ ತಮ್ಮ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರ ಜೊತೆ ಚರ್ಚೆ ನಡೆಸಿ ಇಂತಹದೊಂದು ಉತ್ತಮ ಕಾರ್ಯಕ್ಕೆ ಮುಂದಾಗಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

ಚಕ್ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತೀ ಬಡವರು, ನಿರ್ಗತಿಕರನ್ನು ಗುರುತಿಸಲಾಗಿದ್ದು, ಮೊದಲ ಹಂತವಾಗಿ 146 ಕುಟುಂಬದವರಿಗೆ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಈರುಳ್ಳಿ, ಸಾಂಬಾರ್ ಪುಡಿ, ಹುರುಳಿ ಕಾಳು, ರವೆ, ಸಕ್ಕರೆ ಸೇರಿದಂತೆ ಸುಮಾರು 600 ರೂ. ಮೌಲ್ಯದ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಕಡು ಬಡವರು ಹಾಗೂ ಹೊರ ರಾಜ್ಯದಿಂದ ಉದ್ಯೋಗ ಅರಸಿ ಬಂದಿರುವ ಕೂಲಿ ಕಾರ್ಮಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸ್ಥಿತಿವಂತರನ್ನು ಬಿಟ್ಟು ಉಳಿದವರಿಗೆಲ್ಲಾ ಅಗತ್ಯ ವಸ್ತುಗಳ ವಿತರಣೆ ಮಾಡುವುದಾಗಿ ಪಂಚಾಯ್ತಿ ಪಿಡಿಓ ಯತೀಶ್ ತಿಳಿಸಿದರು.

Comments

Leave a Reply

Your email address will not be published. Required fields are marked *