ಒಬ್ಬಳ ಜೊತೆ ಮದುವೆ, ಮತ್ತೊಬ್ಬಳೊಂದಿಗೆ ಸಂಸಾರ – ವಂಚಕ ಪತಿ ಪೊಲೀಸರ ಅತಿಥಿ

ರಾಮನಗರ: ಸಾಂಪ್ರದಾಯಿಕವಾಗಿ ಒಬ್ಬಳ ಜೊತೆ ಮದುವೆಯಾಗಿ, ಮತ್ತೊಬ್ಬಳ ಜೊತೆ ಮದುವೆ ಆಗದೇ ಸಂಸಾರ ನಡೆಸುತ್ತಾ ಮೊದಲ ಪತ್ನಿಯನ್ನು ಮನೆಯಿಂದ ಹೊರಗಟ್ಟಿದ ಪತಿರಾಯ ವಂಚನೆ ಪ್ರಕರಣದಡಿ ಪೊಲೀಸರ ಅತಿಥಿಯಾದ ಘಟನೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಹಲಗೂರಿನ ಶ್ರೀನಿವಾಸ್ ಪೊಲೀಸರಿಗೆ ಅತಿಥಿಯಾದ ವಂಚಕ ಪತಿರಾಯ. ಅಂದಹಾಗೇ ಶ್ರೀನಿವಾಸನಿಗೆ ಚನ್ನಪಟ್ಟಣ ತಾಲೂಕಿನ ಬಾಣಗನಹಳ್ಳಿ ಸುಕನ್ಯಾ ಜೊತೆ ಕಳೆದ ವರ್ಷ ಮದುವೆಯಾಗಿತ್ತು. ಆದರೆ ಕೆಲವು ತಿಂಗಳ ನಂತರ ವರಸೆ ಬದಲಿಸಿದ್ದ ಶ್ರೀನಿವಾಸ ಕಾರಿಗೆ ಡಿಮ್ಯಾಂಡ್ ಇಟ್ಟು ಹಣ ಪಡೆದುಕೊಂಡಿದ್ದ. ನಂತರ ಶೋಕಿಗೆ ಬಿದ್ದ ಶ್ರೀನಿವಾಸ ಹೊರಗಡೆಯೇ ಹೆಚ್ಚು ಕಾಲ ಕಳೆಯುತ್ತಿದ್ದ.

ಈ ನಡುವೆ ಸುಕನ್ಯಾ ತನ್ನ ಗಂಡನ ಮನೆಯವರ ಕಿರುಕುಳ ತಾಳಲಾರದೆ ಮನೆ ಬಿಟ್ಟು ಹೊರ ಬಂದಿದ್ದಾಳೆ. ಇತ್ತ ಹೊರಗಿದ್ದ ಶ್ರೀನಿವಾಸ್ ದಾವಣಗೆರೆಯಲ್ಲಿ ಮತ್ತೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈಗ ಮೊದಲನೇ ಪತ್ನಿ ಸುಕನ್ಯಾ ನನಗೆ ಶ್ರೀನಿವಾಸ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪೋಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ. ಈಗಾಗಲೇ ನನ್ನ ಮದುವೆಗೆ 4 ರಿಂದ 5 ಲಕ್ಷದ ವರೆಗೆ ನಮ್ಮ ಪೋಷಕರು ಖರ್ಚು ಮಾಡಿದ್ದಾರೆ. ಮದುವೆಯಾಗಿ ಸಂಸಾರ ನಡೆಸಿ ಇದೀಗ ಬೇರೊಬ್ಬಳ ಜೊತೆ ಜೀವನ ಸಾಗಿಸ್ತಿರುವ ಶ್ರೀನಿವಾಸನಿಗೆ ತಕ್ಕ ಶಿಕ್ಷೆಯಾಗಬೇಕೆಂದು ನೊಂದ ಮಹಿಳೆ ಒತ್ತಾಯಿಸಿದ್ದಾಳೆ.

ಶ್ರೀನಿವಾಸ್ ದಾವಣಗೆರೆಯ ಮಹಿಳೆಯೊಬ್ಬಳ ಜೊತೆ ಅಕ್ರಮವಾಗಿ ಸಂಸಾರ ನಡೆಸುತ್ತಿದ್ದಾನೆ. ಆಕೆಗೂ ಮಗು ಇದ್ದು, ಆಕೆ ತಾನೇ ಶ್ರೀನಿವಾಸನ ಮೊದಲ ಪತ್ನಿ ಎಂದು ಸುಕನ್ಯಾಳ ಜೊತೆ ಜಗಳ ನಡೆಸಿದ್ದಾಳೆ. ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದ್ದು, ಗಂಡ ಶ್ರೀನಿವಾಸ್ ಹಾಗೂ ಮತ್ತೋರ್ವ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

Comments

Leave a Reply

Your email address will not be published. Required fields are marked *