ಕಪಾಲ ಬೆಟ್ಟ ವಿವಾದ- ಜ.13ಕ್ಕೆ ಕನಕಪುರ ಚಲೋ

ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಎತ್ತರದ ಏಸು ಕ್ರಿಸ್ತನ ಪ್ರತಿಮೆ ವಿಚಾರವಾಗಿ ಹಿಂದೂ ಜಾಗರಣ ವೇದಿಕೆ ಹಾಗೂ ಆರ್‍ಎಸ್‍ಎಸ್ ಕಾರ್ಯಕರ್ತರು ಜ.13 ರಂದು ಕನಕಪುರ ಚಲೋ ಹಮ್ಮಿಕೊಂಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಉಲ್ಲಾಸ್, ಕಪಾಲ ಬೆಟ್ಟ ಮೊದಲಿಗೆ ಮುನೇಶ್ವರ ಬೆಟ್ಟವಾಗಿತ್ತು. ಮುನೇಶ್ವರನ ಆರಾಧನೆ ಮಾಡುತ್ತಿದ್ದ ಕುರುಹು ಇನ್ನೂ ಬೆಟ್ಟದಲ್ಲಿ ಇದೆ. ಆದರೆ ಅದೇ ಸ್ಥಳದಲ್ಲಿ ಶಿಲುಬೆ ನಿಲ್ಲಿಸಲಾಗಿದೆ. ಈ ಮೂಲಕ ಹಿಂದೂ ಧರ್ಮದವರನ್ನು ತುಳಿದು ಮತಾಂತರ ಮಾಡಿಸಿರುವ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಕಪಾಲ ಬೆಟ್ಟ ಅರಣ್ಯ ಪ್ರದೇಶವಾಗಿದ್ದು, ಗೋಮಾಳ ಜಮೀನಾಗಿದೆ. ಗೋಮಾಳ ಗೋವುಗಳಿಗೆ ಮೀಸಲಿಟ್ಟ ಜಾಗವಾಗಿದ್ದು, ಅಲ್ಲಿನ ಗೋವುಗಳು ಪರದಾಡುವಂತಹ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಜಮೀನು ಪರಭಾರೆ ಕಾನೂನು ಬಾಹಿರವಾಗಿ ನಡೆದಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತೆ ಜಮೀನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ಜ.13ರಂದು ಕನಕಪುರ ಚಲೋ ನಡೆಸುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್‍ನ ಕ್ಷೇತ್ರೀಯ ಪ್ರಮುಖ್ ಪ್ರಭಾಕರ್ ಕಲ್ಲಡ್ಕ ಭಟ್ ಭಾಗವಹಿಸಲಿದ್ದು, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಮನಗರ ಸೇರಿದಂತೆ ಮಂಡ್ಯ, ಕೋಲಾರ ಭಾಗದಲ್ಲಿ ಪ್ರಮುಖವಾಗಿ ಒಕ್ಕಲಿಗರನ್ನೇ ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಕಾದಿದೆ ಎಂದರು.

Comments

Leave a Reply

Your email address will not be published. Required fields are marked *