ಜನ್‍ಧನ್ ಖಾತೆಗೆ 30 ಕೋಟಿ ಹಣ – ಈಗ ಇರೋದು ಕೇವಲ 50 ಸಾವಿರ

– ಎಟಿಎಂ ಕಾರ್ಡ್ ಬ್ಲಾಕ್
– ಸಯ್ಯದ್ ಮಲೀಕ್ ಬುರಾನ್‍ಗೆ ಬೆದರಿಕೆ ಕರೆ
– ಭಾರೀ ವ್ಯವಹಾರ ನಡೆಸಿದ ವ್ಯಕ್ತಿಗಳ ಬಗ್ಗೆ ತನಿಖೆ

ರಾಮನಗರ: ಜನ್ ಧನ್ ಖಾತೆಗೆ 30 ಕೋಟಿ ಬಂದು ಬಿತ್ತು ಎಂಬ ಸುದ್ದಿ ರಾಜ್ಯಾದ್ಯಂತ ಸಖತ್ ಸೌಂಡ್ ಮಾಡಿತ್ತು. ಜನ್‍ಧನ್ ಖಾತೆಗೆ 30 ಕೋಟಿ ಬಂದು ಬಿದ್ದ ಅಕೌಂಟ್‍ನಲ್ಲಿ ಇದೀಗ ಇರುವುದು ಕೇವಲ 50 ಸಾವಿರ ಮಾತ್ರ. ಆದರೆ ಆ ಹಣವನ್ನು ವಿತ್ ಡ್ರಾ ಮಾಡೋಕೆ ಖಾತೆದಾರನಿಗೆ ಅಧಿಕಾರವಿಲ್ಲ. ಬ್ಯಾಂಕ್‍ನಿಂದ ಖಾತೆದಾರರ ಅಕೌಂಟ್‍ನ ವಹಿವಾಟನ್ನು ಸ್ಥಗಿತಗೊಳಿಸಿದರೆ, ಎಟಿಎಂ ಕಾರ್ಡ್ ಬ್ಲಾಕ್ ಮಾಡಲಾಗಿದೆ.

ಅಂದಹಾಗೆ ಚನ್ನಪಟ್ಟಣದ ಬೀಡಿ ಕಾಲೋನಿಯ ನಿವಾಸಿ ರಿಹಾನ ಬಾನುರ ಜನ್‍ಧನ್ ಖಾತೆಗೆ 30 ಕೋಟಿ ರೂಪಾಯಿ ಜಮೆಯಾಗಿರುವ ಸುದ್ದಿ ಸಾಕಷ್ಟು ಸಂಚಲನವನ್ನುಂಟು ಮಾಡಿತ್ತು. ಬರೋಬ್ಬರಿ ಮೂರು ತಿಂಗಳ ಕಾಲ ರಿಹಾನ ಅಕೌಂಟ್‍ನಲ್ಲಿ ದಿನನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ದಿನಕ್ಕೆ ಕನಿಷ್ಟ 20 ಬಾರಿಯಾದರೂ ಸಾವಿರಾರು ರೂಪಾಯಿಗಳ ಲೆಕ್ಕದಲ್ಲಿ ಡಿಪಾಸಿಟ್ ಆಗುತ್ತಿತ್ತು. ಅಲ್ಲದೇ ವಿತ್ ಡ್ರಾ ಕೂಡಾ ಆಗುತ್ತಿತ್ತು. ಆದರೆ ಕೋಟಿ ಕೋಟಿ ವ್ಯವಹಾರ ನಡೆದಿರುವ ರಿಹಾನ ಬಾನು ಅವರ ಅಕೌಂಟ್‍ನಲ್ಲಿ ಸದ್ಯಕ್ಕೆ 50,195 ರೂಪಾಯಿಗಳು ಮಾತ್ರ ಉಳಿದಿದೆ.

ಇದೀಗ ರಿಹಾನ ಬಾನು ಪತಿ ಸಯ್ಯದ್ ಮಲೀಕ್ ಬುರಾನ್‍ಗೆ ದಿನಕ್ಕೊಂದು ಬೆದರಿಕೆ ಕರೆ ಬರುತ್ತಿದೆ. ನಾವು ಐಟಿ, ಇಡಿ ಎಂದು ಹೇಳಿ ಕರೆ ಮಾಡುತ್ತಿದ್ದಾರೆ. ಎಲ್ಲಿದೆ 30 ಕೋಟಿ ಸುಳ್ಳು ಹೇಳಿದರೆ ನಿಮ್ಮನ್ನೇ ಜೈಲಿಗೆ ಹಾಕುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಅಧಿಕಾರಿಗಳಾಗಿದ್ದರೆ ಫೋನ್ ಮಾಡಿ ವಿಚಾರಣೆಗೆ ಕರೆಸಿ ವಿಚಾರಣೆ ಮಾಡುತ್ತಿದ್ದರು. ಆದರೆ ಇವರು ಯಾರೋ ಬೇಕಂತಲೇ ಹೆದರಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಿರುವ ವಹಿವಾಟು ಡಿಸೆಂಬರ್ ತನಕ ನಡೆದಿದೆ. ಡಿಸೆಂಬರ್ 27 ರಂದು 24 ಸಾವಿರ ರೂಪಾಯಿ ಹಣವನ್ನು ಜಮೆ ಮಾಡಿದ್ದ ವೇಳೆ ಬ್ಯಾಂಕ್‍ನವರು ಖಾತೆಯನ್ನು ಸ್ಥಗಿತಗೊಳಿಸಿದ್ದರಿಂದ ಹಣ ಡ್ರಾ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ವಹಿವಾಟು ನಡೆಸುವುದನ್ನು ಅನಾಮಧೇಯ ವ್ಯಕ್ತಿ ಕೈ ಬಿಟ್ಟಿದ್ದಾನೆ. ಖಾತೆಯನ್ನ ಈಗಾಗಲೇ ಸ್ಥಗಿತಗೊಳಿಸಿದರೆ, ಎಟಿಎಂ ಸಹ ಬ್ಲಾಕ್ ಮಾಡಲಾಗಿದೆ.

ಖಾತೆಯ ಬಗ್ಗೆ ಅನುಮಾನಗೊಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರಿಂದ ಬಡದಂಪತಿಗಳು ಪಾರಾಗಿದ್ದಾರೆ. ಇಲ್ಲದಿದ್ದರೆ ನಾಲ್ಕು ರಾಜ್ಯದ ಪೊಲೀಸರು ಇವರನ್ನು ಬಂಧಿಸುವ ಸಾಧ್ಯತೆ ಇತ್ತು. ಚನ್ನಪಟ್ಟಣದಲ್ಲಿ ಪ್ರಕರಣದ ದಾಖಲಾಗಿದ್ದು, ಎಷ್ಟೆಲ್ಲ ವ್ಯವಹಾರ ನಡೆದಿದೆ ಎಂಬ ಬಗ್ಗೆ ಮಾಹಿತಿ ಕ್ರೋಢಿಕರಿಸಲಾಗುತ್ತಿದೆ. ಅತ್ತ ನಾಲ್ಕು ರಾಜ್ಯದ ಪೊಲೀಸರು ಸಹ ಕಾರ್ಯಾಚರಣೆಗೆ ಇಳಿದಿದ್ದಾರೆ.

Comments

Leave a Reply

Your email address will not be published. Required fields are marked *