ಹಳೆ ದ್ವೇಷ – ಗ್ರಾ.ಪಂ ಮಾಜಿ ಉಪಾಧ್ಯಕ್ಷನ ಕತ್ತು ಕಡಿದು ಹತ್ಯೆ

ರಾಮನಗರ: ಬೈಕ್‍ನಲ್ಲಿ ತೆರಳುತ್ತಿದ್ದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷನ ಬೈಕಿಗೆ ಕಾರಿನಿಂದ ಡಿಕ್ಕಿ ಹೊಡೆದು, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಜಾಲಮಂಗಲ ಸಮೀಪದ ನಾಗರಕಲ್ಲುದೊಡ್ಡಿ ಗ್ರಾಮದ ಬಳಿ ನಡೆದಿದೆ.

ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದ ನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಧರ್ (37) ಕೊಲೆಯಾದ ದುರ್ದೈವಿ. ಕೊಲೆಯಾದ ಶ್ರೀಧರ್ ತನ್ನ ಸ್ನೇಹಿತ ಮಧು ಜೊತೆ ಬೈಕ್‍ನಲ್ಲಿ ರಾಮನಗರಕ್ಕೆ ತೆರಳುತ್ತಿದ್ದ ಈ ವೇಳೆ ಹಿಂಬದಿಯಿಂದ ಬಂದ ಇಂಡಿಕಾ ಕಾರ್ ಡಿಕ್ಕಿ ಹೊಡೆದಿದೆ. ಬೈಕ್‍ನಿಂದ ಕೆಳಗೆ ಬಿದ್ದ ಶ್ರೀಧರ್ ಅನ್ನು ಇಂಡಿಕಾ ಕಾರಿನಲ್ಲಿದ್ದ ನಾಲ್ಕೈದು ಜನ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಶ್ರೀಧರ್ ನ ಜೊತೆಗಿದ್ದ ಮಧು ಎಂಬಾತ ದುಷ್ಕರ್ಮಿಗಳಿಂದ ಪರಾರಿಯಾಗಿ ಗಾಯಗೊಂಡಿದ್ದಾನೆ.

ಜೆಡಿಎಸ್ ಪಕ್ಷದಲ್ಲಿದ್ದ ಶ್ರೀಧರ್ ಕಳೆದ 2016 ರಲ್ಲಿ ಜಾಲಮಂಗಲ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದ. ಜೊತೆಗೆ ಕಾಂಗ್ರೆಸ್‍ನ ದತ್ತಾತ್ರೇಯ ಎಂಬಾತನನ್ನು ತನ್ನ ಸಂಗಡಿಗರ ಜೊತೆ ಸೇರಿ ಕೊಲೆ ಮಾಡಿದ್ದ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ 3 ತಿಂಗಳ ಹಿಂದೆ ಜೈಲಿನಿಂದ ಹೊರಗೆ ಬಂದಿದ್ದ.

ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷನಾದ ಬಳಿಕ ಮಾಜಿ ಶಾಸಕ ಎಚ್‍ಸಿ ಬಾಲಕೃಷ್ಣ ಜೊತೆಗೆ ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದ. ಗ್ರಾಮ ಪಂಚಾಯತ್‍ನ ಅನುದಾನಗಳನ್ನು ಬಳಸಿಕೊಂಡು ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ನರೇಗಾ ಕಾಮಗಾರಿಗಳನ್ನು ಮಾಡಿಸುತ್ತಿದ್ದ. ದತ್ತಾತ್ರೇಯ ಕೊಲೆಯ ಹಳೆಯ ದ್ವೇಷ ಹಾಗೂ ರಾಜಕೀಯ ವೈಷಮ್ಯದಿಂದಲೇ ಶ್ರೀಧರ್ ನನ್ನ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಅಲ್ಲದೇ ಘಟನೆ ನಡೆದ ವೇಳೆ ಶ್ರೀಧರ್ ನ ಜೊತೆಗಿದ್ದ ಮಧು ಸಹ ಕೊಲೆಯಲ್ಲಿ ಭಾಗಿಯಾಗಿದ್ದು, ಶ್ರೀಧರ್‍ನ ಚಲನವಲನಗಳನ್ನ ದುಷ್ಕರ್ಮಿಗಳಿಗೆ ನೀಡಿದ್ದಾನೆ. ಕೊಲೆಗೆ ಸ್ಕೆಚ್ ಹಾಕಿರುವುದು ಎರಡು ದಿನಗಳ ಹಿಂದೆಯೇ ತಿಳಿದಿತ್ತು, ಆದರೆ ಶ್ರೀಧರ್ ಗೆ ತಿಳಿಸುವ ವೇಳೆಗೆ ಆತನನ್ನ ಕೊಲೆ ಮಾಡಲಾಗಿದೆ ಎಂದು ಶ್ರೀಧರ್ ನ ಸೋದರ ರಾಜು ಆರೋಪಿಸಿದ್ದಾರೆ.

ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗಾರರಿಗಾಗಿ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *