ಉಪ್ಪು ತಿಂದವರು ನೀರು ಕುಡಿಯಬೇಕು, ಇದು ಈ ನೆಲದ ಸಂಸ್ಕೃತಿ: ಸಿಟಿ ರವಿ

ರಾಮನಗರ: ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು, ಉಪ್ಪು ತಿಂದವರು ನೀರು ಕುಡಿಯಬೇಕು. ಇದು ಈ ನೆಲದ ಸಂಸ್ಕೃತಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ಹೇಳಿದ್ದಾರೆ

ಇಂದು ಬಿಡದಿಯಲ್ಲಿ ಮಾತನಾಡಿದ ಅವರು ಡಿಕೆಶಿಯನ್ನು ಬಂಧನಕ್ಕೆ ಒಳಪಡಿಸಿದ್ದು ನ್ಯಾಯಾಲಯ, ಬಿಜೆಪಿ ಪಕ್ಷವಲ್ಲ. ಅವರ ಬಂಧನಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ ಅವರ ಆದಾಯ ಹೆಚ್ಚಿದೆ. ಅವರ ಮನೆಯಲ್ಲಿ 8.5 ಕೋಟಿ ಹಣ ಸಿಕ್ಕಿದೆ. ಈವಾಗ 800 ಕೋಟಿಗೂ ಅಧಿಕ ಆದಾಯ ಪತ್ತೆ ಆಗಿದೆ. ಏನೇ ಆದರೂ ಜಗತ್ತಿಗೆ ನಂಬಿಸಬಹುದು. ಆದರೆ ಆತ್ಮಸಾಕ್ಷಿ ಸತ್ಯವನ್ನು ಹೇಳುತ್ತದೆ ಎಂದು ತಿಳಿಸಿದರು.

ತಪ್ಪು ಮಾಡಿದವರು ಶಿಕ್ಷೆ ಆಗಬಾರದು ಎಂದು ಕಾಂಗ್ರೆಸ್ ಬಯಸಿದರೆ ಅದು ಈ ನೆಲದ ಕಾನೂನಿನ ವಿರುದ್ಧವಾಗುತ್ತದೆ. ತಪ್ಪು ಮಾಡಿ ಎಲ್ಲರಿಗೂ ಒಂದೇ ಕಾನೂನು, 132 ಕೋಟಿ ಜನರಿಗೂ ಇದು ಅನ್ವಯಿಸುತ್ತದೆ. ಇದರಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಪಾತ್ರವಿಲ್ಲ. ಯಾರೇ ತಪ್ಪು ಮಾಡಿದರು ಶಿಕ್ಷೆ ಅನುಭವಿಸಬೇಕು ಆದರೆ ರಾಜಕೀಯದಿಂದ ಬಂಧಿಸಿದ್ದಾರೆ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ಎಂದರು.

ಐಟಿಗೆ ಸಿಎಂ ಯಡಿಯೂರಪ್ಪ ಎರಡು ವರ್ಷಗಳ ಹಿಂದೆ ಡಿಕೆಶಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಮಾತ್ರ ಪತ್ರ ಬರೆಯಬೇಕಿಲ್ಲ. ನೀವು ಬೇಕಾದರೂ ಯಾರೇ ಬೇಕಾದರೂ ಪತ್ರ ಬರೆಯಬಹುದಾಗಿದ್ದು ದೇಶದ ಎಲ್ಲ ನಾಗರಿಕರಿಗೂ ಪ್ರಶ್ನಿಸುವ ಹಕ್ಕಿದೆ. ಯಾರೇ ಅಕ್ರಮ ಆಸ್ತಿ ಗಳಿಕೆ ಮಾಡಿದರೆ ಅದನ್ನು ಪ್ರಶ್ನಿಸುವ ಅಧಿಕಾರ ದೇಶದ ಎಲ್ಲರಿಗೂ ಇದೆ. ನಾನು ತಪ್ಪು ಮಾಡಿದರೂ ಕೂಡಾ ಜೈಲಿಗೆ ಕಳುಹಿಸುವ ವ್ಯವಸ್ಥೆ ಬಂದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *