ಕ್ವಾರಂಟೈನ್‍ನಲ್ಲಿರುವವರು ಗಂಟೆಗೊಂದು ಸೆಲ್ಫಿ ಅಪ್‍ಲೋಡ್ ಮಾಡಿ: ಡಿಸಿ ಸೂಚನೆ

ರಾಮನಗರ: ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರ ಜಿಲ್ಲೆಯಲ್ಲಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿರುವವರಿಗೆ ಸೆಲ್ಫಿ ತೆಗೆದು ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಷನ್‍ನಲ್ಲಿ ಅಪ್‍ಲೋಡ್ ಮಾಡುವಂತೆ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ನೀಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರಲು ಸೂಚಿಸಿರುವ ವ್ಯಕ್ತಿಗಳು ಕಡ್ಡಾಯವಾಗಿ ಪ್ರತಿ ಗಂಟೆಗೊಂದು ಸೆಲ್ಫಿ ಮತ್ತು ಲೊಕೇಶನ್ ಮೊಬೈಲ್ ಆಪ್‍ನಲ್ಲಿ ಅಪ್‍ಲೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೆಳಿಗ್ಗೆ 7ಗಂಟೆಯಿಂದ ರಾತ್ರಿ 9ಗಂಟೆಯ ತನಕ ಗಂಟೆಗೊಂದು ಸೆಲ್ಫಿ ಕಳುಹಿಸಬೇಕು. ರಾತ್ರಿ 9ರಿಂದ ಬೆಳಗ್ಗೆ 7 ಗಂಟೆಗೆಯವರೆಗಿನ ಅವಧಿಯನ್ನು ನಿದ್ರಾ ಅವಧಿಯೆಂದು ಪರಿಗಣಿಸಿದೆ. ಈ ಅವಧಿಯನ್ನು ಹೊರತು ಪಡಿಸಿ ಇನ್ನುಳಿದ ಅವಧಿಯಲ್ಲಿ ಪ್ರತಿ ಗಂಟೆಗೆ ಒಂದರಂತೆ ಒಟ್ಟು 14 ಸೆಲ್ಫಿಗಳನ್ನು ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೋಂ ಕ್ವಾರಂಟೈನ್ ನಲ್ಲಿರುವವರು ತೆಗೆದು ಕಳುಹಿಸುವ ಸೆಲ್ಫಿಗಳನ್ನು ಯಾವುದೇ ರೀತಿಯಲ್ಲಿ ಸರ್ಕಾರ ಬಳಸಿಕೊಳ್ಳುವುದಿಲ್ಲ. ಸೆಲ್ಫಿಗಳ ಖಾಸಗಿತನವನ್ನು ಸರ್ಕಾರ ಗೌರವಿಸುತ್ತದೆ. ಹಾಗೆಯೇ ಅವುಗಳು ಸೋರಿಕೆಯಾಗದಂತೆ ಕ್ರಮವಹಿಸುತ್ತದೆ. ಹೀಗಾಗಿ ತಪ್ಪದೇ ಸೆಲ್ಫಿಗಳನ್ನು ತೆಗೆದು ಅಪ್‍ಲೋಡ್ ಮಾಡುವಂತೆ ತಿಳಿಸಲಾಗಿದೆ. ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಸೆಲ್ಫಿಗಳನ್ನು ತೆಗೆದು ಅಪ್‍ಲೋಡ್ ಮಾಡದಿರುವುದು ಕಂಡು ಬಂದರೆ ಅದನ್ನು ಲೋಪವೆಂದು ಪರಿಗಣಿಸಿ ಅಂತವರನ್ನು ಗೃಹ ನಿರ್ಬಂಧನದಿಂದ ತೆಗೆದು ಸರ್ಕಾರಿ ಸಮೂಹ ನಿರ್ಬಂಧನಕ್ಕೆ (ಮಾಸ್ ಕ್ವಾರಂಟೈನ್) ಸೇರಿಸಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *