ರಾಮನಗರ: ಸ್ವಚ್ಛ ಶುಕ್ರವಾರ ಅಭಿಯಾನ ಇದೀಗ ರಾಮನಗರ ಜಿಲ್ಲೆಯಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ತಾಲೂಕು ಮಟ್ಟದಲ್ಲಿ ಆರಂಭವಾದ ಸ್ವಚ್ಛ ಶುಕ್ರವಾರ ಇದೀಗ ನಾಲ್ಕೇ ವಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುವಂತೆ ಮಾಡಿದೆ.
ಜಿಲ್ಲೆಯಲ್ಲಿ ಸ್ವಚ್ಛ ಶುಕ್ರವಾರದ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಪಂಚಾಯತಿಯ ಸಿಇಒ ಇಕ್ರಂ ಅವರಿಂದ ಹಿಡಿದು, ಗ್ರಾಮ ಪಂಚಾಯಿತಿಯ ತಳ ಹಂತದ ಸಿಬ್ಬಂದಿವರೆಗೂ ಶುಕ್ರವಾರ ಒಂದು ಗಂಟೆಗಳ ಕಾಲ ಶ್ರಮದಾನ ಮಾಡುವ ಮೂಲಕ ತಮ್ಮ ತಮ್ಮ ಕಚೇರಿ, ಕಟ್ಟಡದ ಆವರಣಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸಿಇಒ ಇಕ್ರಂ, ಉಪ ಕಾರ್ಯದರ್ಶಿ ಉಮೇಶ್, ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಸಹಾಯಕರು ತಮ್ಮ ಜಿಲ್ಲಾ ಪಂಚಾಯಿತಿ ಆವರಣದಲ್ಲಿನ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಗಾಣಕಲ್ ನಟರಾಜು ನೇತೃತ್ವದಲ್ಲಿ ತಾಲೂಕು ಪಂಚಾಯತ್‍ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛ ಶುಕ್ರವಾರ ಕಾರ್ಯಕ್ರಮದಲ್ಲಿ ಬೆವರು ಸುರಿಸಿದರೇ, ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಸ್ವಚ್ಛ ಕಾರ್ಯಕ್ಕೆ ಕೈ ಜೋಡಿಸಿದರು. ತಾಲೂಕು ಪಂಚಾಯಿತಿ ಆವರಣದಲ್ಲಿ ಒಂದು ಗಂಟೆಗಳ ಕಾಲ ಶ್ರಮದಾನ ಮಾಡುವುದರ ಮೂಲಕ ಪೊರಕೆ ಹಿಡಿದು ನಿಂತ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸ್ವಚ್ಛಗೊಳಿಸುವಂತೆ ಸೂಚನೆ ನೀಡುವುದರ ಜತೆಗೆ ಉಪವಿಭಾಗಧಿಕಾರಿ ದಾಕ್ಷಾಯಿಣಿ ಸ್ವತಃ ಪೊರಕೆ ಹಿಡಿದು ತಾವು ಕೂಡ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.
ಶುಕ್ರವಾರ ಕಚೇರಿ ಆರಂಭಕ್ಕೂ ಮುನ್ನಾ ಸ್ವಚ್ಛ ಕಾರ್ಯದಲ್ಲಿ ತೊಡಗಿಸಿಕೊಂಡ ಅಧಿಕಾರಿಗಳು, ಒಂದು ಗಂಟೆಗಳ ಕಾಲದಲ್ಲಿ ಸುತ್ತಮುತ್ತಲಿನ ಪ್ರದೇಶವನ್ನು ಚೊಕ್ಕಗಳಿಸಿದರು. ಕಚೇರಿಯಲ್ಲಿ ಫೈಲ್ ಹಿಡಿದು ಮಗ್ನರಾಗುತ್ತಿದ್ದ ಅಧಿಕಾರಿಗಳು ಪೊರಕೆ ಹಿಡಿದು ತೋರಿದ ಗಾಂಧಿಗಿರಿಗೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು. ರಾಮನಗರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಪ್ರತಿ ಅಂಗನವಾಡಿ ಕೇಂದ್ರ ಶಿಕ್ಷಕಿಯರು, ತಮ್ಮ ತಮ್ಮ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ್ದಾರೆ. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಪಂಚಾಯಿತಿ ಕಾರ್ಯಾಲಯಗಳಲ್ಲಿಯೂ ಶುಕ್ರವಾರ ಸ್ವಚ್ಛ ಶುಕ್ರವಾರವಾಗಿ ಮಾಡಿವೆ.
ಸಂಜೀವಿನಿ ಸ್ವಸಹಾಯ ಮಹಿಳಾ ಗುಂಪಿನ ಸದಸ್ಯರು ಆಯಾ ವ್ಯಾಪ್ತಿಯ ದೇವಾಲಯಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಕೂಡ ಹಾಕಿದ್ದಾರೆ. ಒಟ್ಟಾರೆ ಕಚೇರಿಯ ಆವರಣಕ್ಕೆ ಮಾತ್ರ ಸಿಮೀತವಾಗಿದ್ದ ಸ್ವಚ್ಛತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದು ದೇಗುಲಗಳತ್ತ ಮುಖ ಮಾಡಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ಇದೇ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಮಾತನಾಡಿ, ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವಚ್ಛ ಶುಕ್ರವಾರ ಕಾರ್ಯಕ್ರಮವನ್ನು ಮಾಡಿದ್ದೇವೆ. ಮೊದಲ ವಾರ ಆಗಿರುವ ಕಾರಣ ಕಚೇರಿ ಹಾಗೂ ಕಟ್ಟಡದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದ್ದೇವೆ. ರಾಮನಗರ ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕು ಪಂಚಾಯಿತಿಗಳಲ್ಲಿ ಈ ಕಾರ್ಯ ಏರ್ಪಡಿಸಲಾಗಿದೆ. ಮುಂದಿನ ವಾರದಿಂದ ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛ ಶುಕ್ರವಾರ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.
ಹೊಸ ವರ್ಷವನ್ನು ಪ್ಲಾಸ್ಟಿಕ್ ಮುಕ್ತ ನಮ್ಮ ಮನೆ ಎಂಬ ಶೀರ್ಷಿಕೆಯಡಿ ಮೂರು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತಾ.ಪಂ ವ್ಯಾಪ್ತಿಯ ವಿದ್ಯಾರ್ಥಿಗಳು ತಮ್ಮ ಮನೆಯ ಪ್ಲಾಸ್ಲಿಕ್ ವಸ್ತುಗಳನ್ನು ಶಾಲೆಗೆ ತಂದು ಶೇಖರಣೆ ಮಾಡಿದರೇ, ಅದನ್ನು ತಾಲೂಕು ಪಂಚಾಯಿತಿನಿಂದ ವಿಲೇವಾರಿ ಮಾಡಲಾಗುತ್ತದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ತಿಳಿಸಿದರು.

Leave a Reply