ಕಾಲಿಗೆ ಬಿದ್ರೂ ಸಮಸ್ಯೆ ಕೇಳದ ಶಾಸಕಿ- ಕಾರಿಗೆ ಅಡ್ಡ ಕುಳಿತಿದ್ದಕ್ಕೆ ಮುಖಂಡನಿಂದ ಹಲ್ಲೆ

ರಾಮನಗರ: ಸಮಸ್ಯೆ ಹೇಳಿಕೊಳ್ಳಲು ಬಂದ ವ್ಯಕ್ತಿ ಕಾಲಿಗೆ ಬಿದ್ದರೂ ಆಲಿಸದ ಶಾಸಕಿ ಅನಿತಾ ಕುಮಾರಸ್ವಾಮಿ ಕಾರಿಗೆ ಅಡ್ಡ ಕುಳಿತು ಆಕ್ರೋಶ ಹೊರ ಹಾಕಿದ್ದಕ್ಕೆ, ಜೆಡಿಎಸ್ ಮುಖಂಡ ಹಲ್ಲೆ ನಡೆಸಿದ ಘಟನೆ ರಾಮನಗರದ ನಗರಸಭೆ ಆವರಣದಲ್ಲಿ ನಡೆದಿದೆ.

ರಾಮನಗರದ ವಿನಾಯಕ ನಗರದ ನಿವಾಸಿ ರಾಜು ಹಲ್ಲೆಗೊಳಗಾದ ವ್ಯಕ್ತಿ. ರಾಮನಗರದ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಹಲ್ಲೆ ನಡೆಸಿದ ವ್ಯಕ್ತಿ.

ಅಂದಹಾಗೇ ರಾಮನಗರದ ನಗರಸಭೆಯಲ್ಲಿ ಇಂದು ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಶಾಸಕಿ ಸಭೆ ನಡೆಸಿದ್ದರು. ಆದರೆ ಸಭೆಗೆ ಸಾರ್ವಜನಿಕರು ಹಾಗೂ ಮಾಧ್ಯಮದವರನ್ನು ನಿರ್ಬಂಧಿಸಿದ್ದರು.

ಸಭೆ ಬಳಿಕ ಹೊರಬಂದ ಶಾಸಕಿ ಅನಿತಾ ಕುಮಾರಸ್ವಾಮಿಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಅಹವಾಲು ನೀಡಲು ಮುಂದಾದರು. ಈ ವೇಳೆ ರಾಜು ಸಹ ತಮ್ಮ ಬಡಾವಣೆಯಲ್ಲಿನ ಗ್ಯಾಸ್ ಗೋಡನ್ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲು ಮನವಿ ಮಾಡಿದರು.

ಮನವಿ ಪತ್ರ ನೋಡಿ ಸುಮ್ಮನಾದ ಶಾಸಕಿ ಅನಿತಾ ಕುಮಾರಸ್ವಾಮಿ ಮುಂದೆ ಸಾಗಲು ಪ್ರಯತ್ನಿಸಿದರು. ಈ ವೇಳೆ ಶಾಸಕಿ ಮುಂದೆಯೇ ಕುಳಿತ ರಾಜು, ಕಾಲಿಗೆ ಬಿದ್ದರೂ ಶಾಸಕಿಯ ಮನಸ್ಸು ಮಾತ್ರ ಕರಗಲಿಲ್ಲ. ನೋಡಿಯೂ ನೋಡದೇ ಮುಂದೆ ನಡೆದರು. ಇದರಿಂದ ಕೆರಳಿದ ರಾಜು ಹಾಗೂ ಮತ್ತೋರ್ವ ವ್ಯಕ್ತಿ ಶಾಸಕಿ ಕಾರಿನ ಎದುರು ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷನಿಂದ ಹಲ್ಲೆ:
ಶಾಸಕಿ ಕಾರಿನ ಎದುರು ಕುಳಿತು ಆಕ್ರೋಶ ಹೊರ ಹಾಕಿದ ರಾಜು ಹಾಗೂ ಮತ್ತೋರ್ವ ವ್ಯಕ್ತಿಯ ಮನವೊಲಿಕೆಗೆ ಪೊಲೀಸರು ಮುಂದಾಗಿದ್ರು. ಈ ವೇಳೆ ಮಧ್ಯೆ ಪ್ರವೇಶಿಸಿದ ಜೆಡಿಎಸ್ ರಾಮನಗರ ತಾಲೂಕು ಅಧ್ಯಕ್ಷ ರಾಜಶೇಖರ್ ಹಾಗೂ ಜೆಡಿಎಸ್ ಪದಾಧಿಕಾರಿಗಳು ರಾಜುವಿನ ವಿರುದ್ಧ ಕೆರಳಿದ್ರು. ಶಾಸಕಿ ಕಾರಿನ ಅಡ್ಡ ಕುಳಿತಿದ್ದ ರಾಜು ಹಾಗೂ ಮತ್ತೋರ್ವ ವ್ಯಕ್ತಿಯನ್ನ ಎಳೆದಾಡಿದರು. ಅಲ್ಲದೇ ರಾಜುವಿನ ಕೊರಳ ಪಟ್ಟಿ ಹಿಡಿದ ರಾಜಶೇಖರ್ ಹಲ್ಲೆ ಕೂಡ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು.

ಇಷ್ಟೆಲ್ಲ ಘಟನೆ ನಡೆದರು ಸಹ ಶಾಸಕಿ ಅನಿತಾ ಕುಮಾರಸ್ವಾಮಿ ಮಾತ್ರ ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ. ಪೊಲೀಸರು ಗಲಾಟೆಯನ್ನು ತಿಳಿಗೊಳಿಸಿ ಜೆಡಿಎಸ್ ಪದಾಧಿಕಾರಿಗಳು ಹಾಗೂ ಸಾರ್ವಜನಿಕರನ್ನು ದೂರ ಕಳುಹಿಸಿ, ಶಾಸಕಿ ಅನಿತಾ ಕುಮಾರಸ್ವಾಮಿಯನ್ನು ಬೆಂಗಾವಲು ವಾಹನದ ಮೂಲಕ ಹೊರ ಕಳುಹಿಸಿದರು.

ಸಮಸ್ಯೆ ಹೇಳಿಕೊಂಡು ಬಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ. ಮತ ಹಾಕಿ ಗೆದ್ದ ಜನಪ್ರತಿನಿಧಿಗಳು ಸಮಸ್ಯೆ ಕೇಳದಿದ್ದರೆ ಏನ್ ಮಾಡೋದು ಎನ್ನುವುದು ಹಲ್ಲೆಗೊಳದಾದ ರಾಜುವಿನ ಅಳಲಾಗಿದ್ರೆ, ಶಾಸಕಿ ಹಾಗೂ ಜೆಡಿಎಸ್ ಮುಖಂಡರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *