ರಾಜೀನಾಮೆಗೆ ಕಾರಣ ನೀಡಲು ರಾಮಲಿಂಗಾರೆಡ್ಡಿ ಹಿಂದೇಟು

ಬೆಂಗಳೂರು: ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ ಎಂದು ಹೇಳಿರುವ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ತಮ್ಮ ರಾಜೀನಾಮೆ ಹಿಂದಿನ ಕಾರಣವನ್ನು ನೀಡಲು ಹಿಂದೇಟು ಹಾಕಿದ್ದಾರೆ.

ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮೈತ್ರಿ ಸರ್ಕಾರ, ಮುಖ್ಯಮಂತ್ರಿಗಳ ಬಗ್ಗೆ ಯಾವುದೇ ಕಾರಣಕ್ಕೂ ಅಸಮಾಧಾನ ವ್ಯಕ್ತಪಡಿಸಿಲ್ಲ. ನನ್ನ ರಾಜೀನಾಮೆ ಕಾರಣದ ಬಗ್ಗೆ ಈ ಸಂದರ್ಭದಲ್ಲಿ ಮತ್ತೆ ಮಾತನಾಡಲು ಇಷ್ಟ ಪಡುವುದಿಲ್ಲ. ಆದ್ದರಿಂದ ನೀವೇ ನಿಮ್ಮ ಬಳಿ ಇರುವ ನನ್ನ ಹೇಳಿಕೆಯನ್ನ ರಿವೈಂಡ್ ಮಾಡಿಕೊಂಡು ನೋಡಿ ಎಂದು ಹೇಳುವ ಮೂಲಕ ಕಾರಣ ನೀಡಲು ಹಿಂದೇಟು ಹಾಕಿದರು.

ನಾಳೆ ಸದನಕ್ಕೆ ಹಾಜರಾಗುವೆ ಎಂದು ಈ ಹಿಂದೆಯೇ ಹೇಳಿದ್ದೇನೆ. ಪಕ್ಷದ ಆಂತರಿಕ ವಿಚಾರವಾಗಿ ನಾನು ರಾಜೀನಾಮೆ ನೀಡಿದ್ದೇನೆ. ಸುಪ್ರೀಂ ಕೋರ್ಟಿನ ಆದೇಶದ ಅನ್ವಯ ಸ್ಪೀಕರ್ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು. ಅಲ್ಲದೇ ನೀವು ಬಿಜೆಪಿಗೆ ಸೇರ್ಪಡೆ ಆಗುತ್ತೀರಿ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಈ ಬಗ್ಗೆ ಹೇಳಿದ್ದೇನೆ. ಇದನ್ನು ನೀವೇ ಆರ್ಥೈಸಿಕೊಳ್ಳಿ ಎಂದರು. ಈ ಹಿಂದೆ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರು, ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದು, ಪಕ್ಷದ ಸದಸ್ಯನಾಗಿದ್ದೇನೆ ಎಂದಿದ್ದರು.

ಇತ್ತ ಸ್ಪೀಕರ್ ಅವರು ನ್ಯಾಯಾಲಯ ತೀರ್ಪನ್ನು ಸ್ವಾಗತ ಮಾಡಿದ್ದು, ಕೋರ್ಟ್ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಯನ್ನ ವಹಿಸಿದೆ. ಕಾನೂನು, ಸಂವಿಧಾನದ ಅನ್ವಯ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುತ್ತೇನೆ ಎಂದರು. ವಿಶ್ವಾತಮತಯಾಚನೆಯೂ ಕೂಡ ನಿಯಮಗಳ ಅಡಿಯೇ ನಡೆಯುತ್ತದೆ ಎಂದರು.

Comments

Leave a Reply

Your email address will not be published. Required fields are marked *