ಅಯೋಧ್ಯೆಯಲ್ಲಿ ರಾಮಮಂದಿರ, ಲಕ್ನೋದಲ್ಲಿ ಮಸೀದಿ ನಿರ್ಮಾಣ: ರಾಮ ಜನ್ಮಭೂಮಿ ವೇದಿಕೆ ಅಧ್ಯಕ್ಷ

ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಜೊತೆ ಉತ್ತರಪ್ರದೇಶದ ರಾಜಧಾನಿಯಲ್ಲಿ ಮಸೀದಿಯನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ಮಾಜಿ ಸಂಸದ ಹಾಗೂ ರಾಮ ಜನ್ಮಭೂಮಿ ವೇದಿಕೆ ಅಧ್ಯಕ್ಷ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ.

ರಾಮ ಮಂದಿರ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಡಿಸೆಂಬರ್ ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಜೊತೆಗೆ ಲಕ್ನೋದಲ್ಲಿ ಮಸೀದಿಯನ್ನು ನಿರ್ಮಿಸುತ್ತೇವೆ. ದೇವಾಲಯ ಹಾಗೂ ಮಸೀದಿಯ ನಿರ್ಮಾಣ ಕಾರ್ಯಕ್ಕೆ ಯಾವುದೇ ಆದೇಶ ಕಾಯದೇ, ಪರಸ್ಪರ ಒಪ್ಪಂದದ ಮೇರೆಗೆ ನಿರ್ಮಾಣ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಸಿದ್ಧವಾಗಿದ್ದು, ಇದೇ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತದೆ ಎಂದು ಹೇಳಿದರು.

2010ರ ಆಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ಅಕ್ಟೋಬರ್ 29ರಂದು ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗಾಯ್ ನ್ಯಾ. ಎಸ್.ಕೆ.ಕೌಲ್ ಹಾಗೂ ಕೆ.ಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ಜನವರಿ, ಫೆಬ್ರವರಿ ಇಲ್ಲವೇ ಮೇ ತಿಂಗಳಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿ ಮುಂದೂಡಿತ್ತು. ನಮಗೆ ನಮ್ಮದೇ ಆದ ಆದ್ಯತೆಗಳಿವೆ. ಹೀಗಾಗಿ ಅಯೋಧ್ಯೆ ಕುರಿತು ಪ್ರತಿನಿತ್ಯ ವಿಚಾರಣೆ ನಡೆಸಬೇಕೆ? ಬೇಡವೇ ಎನ್ನುವ ಬಗ್ಗೆ ತೀರ್ಮಾನವನ್ನು ಅಂದೇ ಕೈಗೊಳ್ಳುತ್ತೇವೆಂದು ಪೀಠ ತಿಳಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *