ರಾಹುಲ್ ಗಾಂಧಿಯನ್ನು ಗೋಡ್ಸೆಗೆ ಹೋಲಿಸಿದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಡೆದ ‘ಇಂಡಿಯಾ ಅಟ್ 75’ ಕಾರ್ಯಕ್ರಮದ ಭಾಗವಾಗಿ ಅವರು ಇತಿಹಾಸ ಪ್ರಾಧ್ಯಾಪಕಿ, ಶಿಕ್ಷಣ ತಜ್ಞೆ ಡಾ.ಶ್ರುತಿ ಕಪಿಲಾ ಅವರು ನಡೆಸಿದ ಸಂದರ್ಶನದಲ್ಲಿ ರಾಹುಲ್ ಭಾಗಿಯಾಗಿದ್ದರು. ಈ ಸಂದರ್ಶನದ ವಿಡಿಯೋದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಸಂದರ್ಶಕಿ ಶ್ರುತಿ ಕಪಿಲಾ ಮಾತನಾಡುತ್ತಾ, ‘ಹಿಂಸೆಯು ಈ ನಮ್ಮ ಪೀಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅನಿಸುತ್ತಿದೆ. ಅದರಲ್ಲೂ ನಿಮ್ಮ ವಿಷಯದಲ್ಲಿ ಈ ಹಿಂಸೆಯು ಹೆಚ್ಚು ವೈಯಕ್ತಿಕವೂ ಆಗಿದೆ ಅಂತ ಅನಿಸುವುದಿಲ್ಲವೆ? ಎಂದು ರಾಜೀವ್ ಗಾಂಧಿ ಹತ್ಯೆ ನೆನಪಿಸಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಬೇಕಿದ್ದ ರಾಹುಲ್, ಮೌನಕ್ಕೆ ಜಾರುತ್ತಾರೆ. ಈ ಮೌನಕ್ಕೆ ಜಾರುವ ವಿಡಿಯೋ ತುಣುಕೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಶೇರ್ ಮಾಡಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಅದಕ್ಕೊಂದು ಕ್ಯಾಪ್ಸನ್ ಕೂಡ ಕೊಟ್ಟಿದ್ದಾರೆ. ವಿಡಿಯೋದ ಜೊತೆಗೆ ‘ಈ ವಿಡಿಯೋ ನೋಡಿದ ಮೇಲೆ ನನಗೆ ಗಟ್ಟಿಯಾಗಿ ಅನಿಸೋಕೆ ಶುರುವಾಗಿದ್ದು, ‘ಒಂದು ವೇಳೆ ಕಾಂಗ್ರೆಸ್ ಪಾರ್ಟಿ ಗಾಂಧಿಯಾದರೆ, ರಾಹುಲ್ ಅದರ ಪಾಲಿನ ಗೋಡ್ಸೆ’ ಎಂದು ಬರೆದಿದ್ದಾರೆ. ಈ ರಾಮ್ ಗೋಪಾಲ್ ವರ್ಮಾ ಬರಹ, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ರಾಹುಲ್ ಗಾಂಧಿಯನ್ನು ಗೋಡ್ಸೆಗೆ ಹೋಲಿಸಿದ್ದು ಯಾಕೆ? ಎಂದು ಹಲವರು ಪ್ರಶ್ನೆ ಕೇಳಿದ್ದರೆ, ಗೋಡ್ಸೆಗೆ ಅವರನ್ನು ಹೋಲಿಸಬೇಡಿ ಎಂದು ಕೆಲವರು ಕಾಲು ಎಳೆದಿದ್ದಾರೆ. ನಿಮ್ಮ ಬರಹದ ಹಿಂದಿನ ಉದ್ದೇಶವನ್ನು ಸ್ಪಷ್ಟ ಪಡಿಸಿ ಎಂದು ರಾಹುಲ್ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಇದಾವುದಕ್ಕೂ ವರ್ಮಾ ಈವರೆಗೂ ಉತ್ತರ ಕೊಡದೇ, ಅವರು ಕೂಡ ಮೌನವಹಿಸಿದ್ದಾರೆ.

Comments

Leave a Reply

Your email address will not be published. Required fields are marked *