ಕೊರೊನಾ ಬಂದಿದೆ ಎಂದ ಆರ್‌ಜಿವಿ- ನೆಟ್ಟಿಗರಿಂದ ತರಾಟೆ

ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳ ಅಪ್‍ಡೇಟ್ ಜೊತೆಗೆ ಕೆಲಸ ಹಾಸ್ಯಮಯ ಪೋಸ್ಟ್ ಹಾಗೂ ವಿವಿಧ ಪೋಸ್ಟ್ ಗಳನ್ನು ಹಾಕುತ್ತಲೇ ಇರುತ್ತಾರೆ. ಅವರ ಪೋಸ್ಟ್ ಗಳನ್ನು ನೆಟ್ಟಿಗರು ಮೆಚ್ಚುವುದಕ್ಕಿಂತ ಹೆಚ್ಚಾಗಿ ಟ್ರೋಲ್ ಮಾಡುವುದೇ ಹೆಚ್ಚು. ಆದರೆ ಈ ಬಾರಿ ಮಹಾಮಾರಿ ಕೊರೊನಾ ವಿಚಾರದಲ್ಲಿ ರಾಮ್ ಗೋಪಾಲ್ ವರ್ಮಾ ಅವರಿಗೆ ಹಿಗ್ಗಾಮುಗ್ಗ ಬೈದಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರ ಪೋಸ್ಟ್‍ಗಳೇ ಹಾಗೆ, ಯಾವಾಗಲೂ ಟ್ರೋಲ್‍ಗೆ ಒಳಗಾಗುತ್ತವೆ. ಇದೀಗ ಏಪ್ರಿಲ್ 1ರಂದು ಅವರು ನನಗೆ ಕೊರೊನಾ ಸೋಂಕು ತಗುಲಿದೆ, ನಮ್ಮ ವೈದ್ಯರು ದೃಢಪಡಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ನೋಡಿದ ನೆಟ್ಟಿಗರು ತುಂಬಾ ಆಶ್ಚರ್ಯದಿಂದ ಪ್ರಶ್ನಿಸಲು ಆರಂಭಿಸಿದ್ದಾರೆ. ಇದ್ದಕ್ಕಿದ್ದಂತೆ ಏನಾಯಿತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರೊಂದಿಗೆ ಸಂಪರ್ಕ ಹೊಂದಿದ್ದ ಹಲವರು ನಮಗೂ ಬಂದಿದ್ಯಾ ಎಂದು ಗಾಬರಿಯಾಗಿದ್ದಾರೆ. ಕೆಲವೇ ಹೊತ್ತಿನಲ್ಲಿ ಮತ್ತೊಂದು ಟ್ವೀಟ್ ಮಾಡಿದ್ದು, ನಿರಾಶೆ ಮಾಡಿದ್ದಕ್ಕೆ ಕ್ಷಮಿಸಿ, ಇದೀಗ ವೈದ್ಯರು ಮತ್ತೆ ನನಗೆ ತಿಳಿಸಿದ್ದಾರೆ ಅವರು ಮಾಡಿದ್ದು ಜೋಕ್ ಅಂತೆ, ಇದು ನನ್ನದಲ್ಲ ಅವರ ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ.

ಏನೇ ಆಗಲಿ ಕಠೋರ ಪರಿಸ್ಥಿತಿಯನ್ನು ಬೆಳಕಿಗೆ ತರಲು ಪ್ರಯತ್ನಿಸಿದೆ. ಆದರೆ ಈ ಜೋಕ್ ನನ್ನ ಮೇಲೆ ಮಾಡಲಾಗಿದೆ. ಇದರಿಂದಾಗಿ ಯಾರಿಗಾದರೂ ಆಘಾತವಾಗಿದ್ದರೆ, ಅವರಲ್ಲಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಮಾಡಿದ್ದೇ ತಡ ನೆಟ್ಟಿಗರು ಫುಲ್ ಗರಂ ಆಗಿದ್ದು, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ಇದು ನಿಮ್ಮ ಪೋಷಕರ ದೋಷ ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಇಂತಹ ಗಂಭೀರ ವಿಷಯದಲ್ಲಿ ಈ ರೀತಿ ಸುಳ್ಳು ಹೇಳುತ್ತೀರಲ್ಲಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ನಮ್ಮಿಂದ ಸ್ವಲ್ಪ ದೂರವೇ ಇರಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನಿಮಗೆ ದರಿದ್ರವೇನಾದರೂ ಬಡಿದಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ರಾಮ್ ಗೋಪಾಲ್ ಅವರು ಈ ಟ್ವೀಟ್ ತೀವ್ರ ಚರ್ಚೆಗೆ ಕಾರಣವಾಗಿದ್ದು, ಹಲವರು ಬಯ್ಯುತ್ತಿದ್ದರೆ, ಇನ್ನೂ ಹಲವರು ಜೋಕ್ ಕುರಿತು ಮಾತನಾಡಿದ್ದಾರೆ.

Comments

Leave a Reply

Your email address will not be published. Required fields are marked *