ಇರಾಕ್ ಬಂಡೆಯ ಮೇಲೆ ರಾಮನ ಚಿತ್ರ ಪತ್ತೆ

ಲಖನೌ: ಭಾರತೀಯ ನಿಯೋಗವೊಂದು ಜೂನ್‍ನಲ್ಲಿ ಇರಾಕ್ ಯಾತ್ರೆ ಕೈಗೊಂಡಿದ್ದ ವೇಳೆ ಕ್ರಿಸ್ತಪೂರ್ವ 2000ನೇ ಇಸವಿಯ ಕಾಲದ್ದು ಎನ್ನಲಾದ ಪ್ರಾಚೀನ ಬಂಡೆಯ ಮೇಲೆ ಶ್ರೀರಾಮನ ಚಿತ್ರ ಕಾಣಿಸಿಕೊಂಡಿವೆ ಎಂದು ಅಯೋಧ್ಯಾ ಶೋಧ ಸಂಸ್ಥಾನ ಹೇಳಿದೆ.

ಇರಾಕ್‍ನ ಹೊರೇನ್ ಶೇಖಾನ್ ಪ್ರದೇಶಕ್ಕೆ ಹೋಗುವ ಕಿರುದಾದ ದಾರಿಯ ಎದುರಿನ ಮಣ್ಣಿನ ಗೋಡೆಯೊಂದರಲ್ಲಿ (ದರ್ಬಂದ್-ಇ-ಬೆಲುಲಾ) ಈ ಚಿತ್ರ ಕಂಡುಬಂದಿದೆ. ಈ ಚಿತ್ರದಲ್ಲಿ ಎದೆಯ ಮೇಲೆ ಯಾವುದೇ ಅಲಂಕಾರವಿಲ್ಲದ ರಾಜನೊಬ್ಬ ಧನುಸ್ಸನ್ನು ಹಿಡಿದು ಬಾಣ ಹೂಡುತ್ತಿರುವ ಚಿತ್ರಣವಿದೆ. ಅಲ್ಲದೇ ರಾಜನ ಸೊಂಟಕ್ಕೆ ಖಡ್ಗವನ್ನು ಸಿಕ್ಕಿಸಿಕೊಂಡಂತೆ ಇದೆ. ರಾಜನ ಎದುರಿಗೆ ಪಾದದ ಬಳಿ ಕೈಮುಗಿದು ಕುಳಿತ ಸೇವಕನ ಚಿತ್ರವಿದ್ದು, ಅದು ಹನುಮಂತನದ್ದಾಗಿರಬಹುದು ಎಂದು ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕರು ಹೇಳಿದ್ದಾರೆ.

ಇರಾಕ್‍ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ನೇತೃತ್ವದ ನಿಯೋಗವು ಅಯೋಧ್ಯಾ ಶೋಧ ಸಂಸ್ಥಾನದ ಕೋರಿಕೆ ಮೇರೆಗೆ ಈ ಪ್ರದೇಶಕ್ಕೆ ಯಾತ್ರೆ ಕೈಗೊಂಡಿತ್ತು. ಅಯೋಧ್ಯಾ ಶೋಧ ಸಂಸ್ಥಾನವು ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಅಧ್ಯಯನ ಸಂಸ್ಥೆಯಾಗಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿ ಚಂದ್ರಮೌಳಿ ಕರ್ಣ, ಸುಲೈಮಾನಿಯಾ ವಿಶ್ವವಿದ್ಯಾಲಯದ ಇತಿಹಾಸ ತಜ್ಞರು ಮತ್ತು ಕುರ್ದಿಸ್ಥಾನದ ಇರಾಕಿ ಗವರ್ನರ್ ಕೂಡ ಈ ಶೋಧ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್ ಹೇಳುವ ಪ್ರಕಾರ, ನಿಯೋಗ ಈಗ ಸಂಗ್ರಹಿಸಿರುವ ಭೌಗೋಳಿಕ ದಾಖಲೆಗಳ ವಿಸ್ತೃತ ಅಧ್ಯಯನದಿಂದ ಭಾರತೀಯ ಮತ್ತು ಮೆಸೊಪೊಟೇಮಿಯಾ ಸಂಸ್ಕೃತಿಗಳ ನಡುವಣ ಕೊಂಡಿಯನ್ನು ಪತ್ತೆ ಮಾಡಬಹುದು. ಮತ್ತು ಮಣ್ಣಿನ ಕೆತ್ತನೆಯಲ್ಲಿ ಕಂಡು ಬರುವ ದೊರೆ ಮತ್ತು ಸೇವಕನ ಚಿತ್ರಣವು ನಮ್ಮಲ್ಲಿ ಹಲವರಿಗೆ ಭಗವಾನ್ ಶ್ರೀರಾಮ ಮತ್ತು ಹನುಮಂತನನ್ನು ನೆನಪಿಗೆ ತಂದಿತು ಎಂದಿದ್ದಾರೆ.

ಇರಾಕಿನ ವಿದ್ವಾಂಸರು, ಮಣ್ಣಿನ ಗೋಡೆಯ ಚಿತ್ರಣವು ಪರ್ವತ ಪ್ರದೇಶದ ಬುಡಕಟ್ಟು ನಾಯಕ ತಾರ್ದುನ್ನಿಯನ್ನು ಹೋಲುತ್ತದೆ. ಹಿಂದೆಯೂ ಇರಾಕ್‍ನ ಕೆಲವೆಡೆ ಈ ರೀತಿಯ ಮಣ್ಣಿನ ಭಿತ್ತಿ ಕೆತ್ತನೆಗಳಲ್ಲಿ ರಾಜ ಹಾಗೂ ಅವನ ಮುಂದೆ ಮಂಡಿಯೂರಿ ಕುಳಿತ ಸೇವಕನ ಚಿತ್ರಗಳು ಕಂಡು ಬಂದಿವೆ. ಈ ಸೇವಕನನ್ನು ರಾಜನು ಬಂಧಿಸಿ ಕರೆತಂದ ಕೈದಿಯಾಗಿರಬಹುದು ಎಂದು ಹೇಳಿದ್ದಾರೆ.

ಇರಾಕಿನ ಪ್ರಾಚೀನ ವಸ್ತು ಸಂಶೋಧಕರು ಮತ್ತು ಇತಿಹಾಸಕಾರರ ಪ್ರಕಾರ ಈ ಚಿತ್ರಗಳಿಗೂ ಭಗವಾನ್ ರಾಮನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಪ್ರತಾಪ್ ಸಿಂಗ್ ಅವರು ಎರಡೂ ನಾಗರಿಕತೆಗಳ ನಡುವಣ ಸಂಬಂಧದ ಕೊಂಡಿಯನ್ನು ಶೋಧಿಸಲು ಇರಾಕ್ ಸರ್ಕಾರದ ಅನುಮತಿ ಅಗತ್ಯವಿದೆ. ಅನುಮತಿಗಾಗಿ ನಾವು ಸರ್ಕಾರಕ್ಕೆ ಕೋರಿಕೆ ಮಾಡಿದ್ದೇವೆ ಎಂದು ತಿಳಿಸಿದರು.

ಜಗತ್ತಿನ ಹಲವು ಭಾಗಗಳಲ್ಲಿ ಶ್ರೀರಾಮನ ಹೆಜ್ಜೆ ಗುರುತುಗಳ ದಾಖಲೆಗಳು ಲಭ್ಯವಾಗಿವೆ. ಹೀಗೆ ಜಗತ್ತಿನ ನಾನಾ ಭಾಗಗಳಲ್ಲಿ ಪತ್ತೆಯಾದ ದಾಖಲೆಗಳ ಪ್ರತಿಕೃತಿಗಳನ್ನು ಅಯೋಧ್ಯೆಯಲ್ಲಿ ಒಂದೇ ಕಡೆ ಸಂಗ್ರಹಿಸಿ ಇಡುವ ಉದ್ದೇಶವಿದೆ. ಸಿಂಧೂ ನಾಗರಿಕತೆ ಮತ್ತು ಮೆಸೊಪೊಟೇಮಿಯಾ ನಾಗರಿಕತೆಗಳ ನಡುವೆ ಸಂಬಂಧ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮೊದಲ ಅಧಿಕೃತ ಪ್ರಯತ್ನ ಇದಾಗಿದೆ ಎಂದು ಸಿಂಗ್ ತಿಳಿಸಿದರು.

Comments

Leave a Reply

Your email address will not be published. Required fields are marked *