ನಮ್ಮ ನೆರೆರಾಷ್ಟ್ರದಂತವರು ಮತ್ಯಾರಿಗೂ ಸಿಗದಿರಲಿ: ಪಾಕ್ ವಿರುದ್ಧ ರಾಜನಾಥ್ ಸಿಂಗ್ ಕಿಡಿ

– ಪಾಕ್ ವಿರುದ್ಧ ಅಸಮಾಧಾನ ಹೊರ ಹಾಕಿದ ರಕ್ಷಣಾ ಸಚಿವ

ನವದೆಹಲಿ: ನಮ್ಮ ನೆರೆರಾಷ್ಟ್ರದಂತವರು ಉಳಿದ ಯಾವ ದೇಶಕ್ಕೂ ಸಿಗದಿರಲಿ ಅಂತ ಪಾರ್ಥಿಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ದೆಹಲಿಯಲ್ಲಿ ಗುರುವಾರ ಸೇನಾ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಹಾಗೂ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸುವ ಪಾಕಿಸ್ತಾನದ ನಿರ್ಧಾರದ ಬಗ್ಗೆ ಕಿಡಿಕಾರಿದ್ದಾರೆ.

ನಮ್ಮ ನೆರೆಯ ರಾಷ್ಟ್ರಗಳ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸುತ್ತೇವೆ. ಸ್ನೇಹಿತರನ್ನು ಬದಲಿಸಲು ಸಾಧ್ಯವಿದೆ. ಆದರೆ ನೆರೆಯ ದೇಶವನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ನಮಗೆ ಸಿಕ್ಕಿರುವ ನೆರೆಯ ರಾಷ್ಟ್ರವು ಯಾವುದೇ ದೇಶಕ್ಕೂ ಸಿಗದಿರಲಿ ಅಂತ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದು ಮಾಡಿದ ಬೆನ್ನಲ್ಲೇ ಪಾಕಿಸ್ತಾನವು ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಈಗಾಗಲೇ ಆರ್ಥಿಕತೆ ಕುಸಿದಿದ್ದು ವಿದೇಶಗಳಿಂದ ನೆರವು ಬೇಡುತ್ತಿದೆ. ಈಗ ಭಾರತದ ಜೊತೆ ವ್ಯಾಪಾರವನ್ನು ಸ್ಥಗಿತಗೊಳಿಸುವ ಮೂಲಕ ಪಾಕ್ ತನ್ನ ಆತ್ಮಹತ್ಯೆಗೆ ತಾನೇ ಶರಣಾಗುತ್ತಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

ಪಾಕಿಸ್ತಾನ ಈಗ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೆಳಮಟ್ಟಕ್ಕಿಳಿಸುವುದಾಗಿ ಘೋಷಿಸಿದೆ. ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಹೇಳಿಕೊಂಡಿದೆ. ಈ ನಿಟ್ಟಿನ ಪಾಕ್ ತನ್ನ ರಾಯಭಾರಿಯನ್ನು ಭಾರತದಿಂದ ವಾಪಸ್ ಕರೆಸಿಕೊಳ್ಳುವುದಾಗಿ ಮತ್ತು ಪಾಕಿಸ್ತಾನದ ಭಾರತೀಯ ರಾಯಭಾರಿಯನ್ನು ಹೊರಹಾಕುವುದಾಗಿ ಘೋಷಿಸಿದೆ. ಈ ಸುದ್ದಿಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರು ಬುಧವಾರ ಸ್ಥಳೀಯ ಮಾಧ್ಯಮಗಳಿಗೆ ಖಚಿತಪಡಿಸಿದ್ದರು.

ಇಸ್ಲಾಮಾಬಾದ್‍ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಅನೇಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಸಮಿತಿಯು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ತನ್ನ ನಿರ್ಧಾರದಂತೆ ಹೆಜ್ಜೆ ಹಾಕುತ್ತಿರುವ ಪಾಕ್ ಸಂಜೋತಾ ಎಕ್ಸ್‌ಪ್ರೇಸ್ ರೈಲು ಸೇವೆಯನ್ನು ಇಂದು ರದ್ದುಗೊಳಿಸಿದೆ. ಈ ವಿಚಾರವನ್ನು ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ದೃಢಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *