ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ

ಬೆಂಗಳೂರು: ದೇಶೀಯ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್‍ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ಹಾರಾಟ ನಡಸಿದ್ದಾರೆ.

ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ರಾಜನಾಥ್ ಸಿಂಗ್ ಅವರು ಯುದ್ಧ ವಿಮಾನದ ಪೈಲಟ್ ಧಿರಿಸಿನಲ್ಲಿ ತೇಜಸ್‍ನ ಕೋ-ಪೈಲಟ್ ಸ್ಥಾನದಲ್ಲಿ ಕುಳಿತರು. ಹಾರಾಟಕ್ಕೂ ಮುನ್ನ ಸಂತಸದಿಂದ ಜನರತ್ತ ಕೈ ಬೀಸಿದರು. ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ ಶಸ್ತ್ರ ಸಜ್ಜಿತ ತೇಜಸ್ ವಾಯುಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಈ ವಿಮಾನವು ‘ಅರೆಸ್ಟ್ ಲ್ಯಾಂಡಿಂಗ್’ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.

ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಪಾತ್ರರಾದರು. ಎರಡು ಆಸನಗಳ ಸಾಮರ್ಥ್ಯ ಹೊಂದಿರುವ ತೇಜಸ್ ನಲ್ಲಿ ರಾಜನಾಥ್ ಸಿಂಗ್ ಅವರಿಗೆ ಏರ್ ವೈಸ್ ಮಾರ್ಷಲ್, ಪ್ರೊಜೆಕ್ಟ್ ಡೈರೆಕ್ಟರ್ ಎನ್.ತಿವಾರಿ ಸಾಥ್ ನೀಡಿದರು.

2018 ಜೂನ್ ನಲ್ಲಿ 18 ತೇಜಸ್ ಯುದ್ಧವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿವೆ. 2013ರಲ್ಲಿ ತೇಜಸ್ ಯುದ್ಧ ವಿಮಾನಗಳಿಗೆ ಪರೀಕ್ಷಾರ್ಥವಾಗಿ ಹಾರಾಟ ನಡೆಸಲು ಅನುಮತಿ ನೀಡಲಾಗಿತ್ತು. ಭಾರತೀಯ ವಾಯುಸೇನೆ ಸದ್ಯ ಎರಡು ಸ್ಕಾಡ್ರನ್ ಗಳ 18 ಯುದ್ಧ ವಿಮಾನಗಳನ್ನು ಹೊಂದಿದ್ದು, ಹೆಚ್ಚು ಸ್ಕಾಡ್ರನ್ ವುಳ್ಳ ಮಾರ್ಕ್-1 ವರ್ಷನ್ ನ 83 ಯುದ್ಧ ವಿಮಾನಗಳನ್ನ ಹೊಂದುವ ಮೂಲಕ ಐಎಎಫ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. 83 ತೇಜಸ್ ಯುದ್ಧ ವಿಮಾನಗಳ ತಯಾರಿಕೆಗೆ 50 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

2019ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ತೇಜಸ್ ನಲ್ಲಿ ಹಾರಾಟ ನಡೆಸಿದ್ದರು.

Comments

Leave a Reply

Your email address will not be published. Required fields are marked *