ಬಾಹುಬಲಿಯನ್ನ ಹಿಂದಿಕ್ಕಿ ಆಸ್ಕರ್‍ಗೆ ಆಯ್ಕೆಯಾದ ನ್ಯೂಟನ್

ನವದೆಹಲಿ: ಬಾಲಿವುಡ್‍ನ ಪ್ರತಿಭಾವಂತ ನಟ ರಾಜ್‍ಕುಮಾರ್ ರಾವ್ ಅವರು ಈ ವರ್ಷ ಅದ್ಭುತ ಯಶಸ್ಸನ್ನು ಕಂಡಿದ್ದಾರೆ. ಅವರ `ಬರೇಲಿ ಕಿ ಬರ್ಫಿ’ ಚಿತ್ರದ ಯಶಸ್ಸಿನ ನಂತರ ಇತ್ತೀಚಿಗೆ ಬಿಡುಗಡೆಯಾದ `ನ್ಯೂಟನ್’ ಚಿತ್ರ ಆಸ್ಕರ್‍ಗೆ ಆಯ್ಕೆಯಾಗಿದೆ.

ಭಾರತದ ಚಿತ್ರ ಅಧಿಕೃತವಾಗಿ ಈ ವರ್ಷ ಆಸ್ಕರ್‍ಗೆ ಆಯ್ಕೆಯಾಗಿರುವುದು ತುಂಬಾ ತುಂಬಾ ಖುಷಿಯಾಗಿದೆ ಎಂದು ತಮ್ಮ ಆನಂದವನ್ನು ಟ್ವೀಟ್ ಮಾಡಿ ಅಭಿಮಾನಿಗಳ ಜೊತೆ ರಾಜ್‍ಕುಮಾರ್ ರಾವ್ ಹಂಚಿಕೊಂಡಿದ್ದಾರೆ. ಈ ಸುದ್ದಿ ಹೊರಬಿದ್ದ ನಂತರ ಬಾಲಿವುಡ್ ಕಲಾವಿದರು ನ್ಯೂಟನ್ ಚಿತ್ರತಂಡಕ್ಕೆ ಟ್ವಿಟ್ಟರ್‍ನಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ.

ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಕೂಡ ಆಸ್ಕರ್‍ಗೆ ಆಯ್ಕೆಯಾಗುವ ರೇಸ್‍ನಲ್ಲಿತ್ತು. ಆದ್ರೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆಹೊಡೆದು, ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದ ಬಾಹುಬಲಿ-2 ಚಿತ್ರ ಆಸ್ಕರ್‍ಗೆ ಆಯ್ಕೆಯಾಗಿಲ್ಲ.

ವಿವಿಧ ಭಾಷೆಗಳ ಸುಮಾರು 26 ಚಿತ್ರಗಳು ಆಸ್ಕರ್‍ಗೆ ಎಂಟ್ರಿ ಮಾಡಿಕೊಂಡಿದ್ದವು. 12 ಹಿಂದಿ, 5 ಮರಾಠಿ, 5 ತೆಲುಗು, 1 ತಮಿಳು, ಕನ್ನಡ, ಮಲೆಯಾಳಂ ಮತ್ತು ಬೆಂಗಾಲಿ ಭಾಷೆಯ 5 ಸಿನಿಮಾಗಳು ಈ ರೇಸ್‍ನಲ್ಲಿದ್ದವು. ನಾವು ಈ ತಿಂಗಳ 16 ರವರೆಗೆ ಎಲ್ಲಾ ಭಾಷೆಯ ಸಿನಿಮಾಗಳನ್ನ ನೋಡಿದ್ದೇವೆ. ಎಲ್ಲವನ್ನೂ ನೋಡಿದ ನಂತರ ಎಲ್ಲಾ ಆ್ಯಂಗಲ್‍ಗಳನ್ನ ಪರಿಗಣಿಸಿ ನ್ಯೂಟನ್ ಚಿತ್ರ ಆಯ್ಕೆಯಾಗಿದೆ ಎಂದು ತೀರ್ಪುಗಾರರಲ್ಲೊಬ್ಬರು ಹೇಳಿದ್ದಾರೆ .

ಈಗ ನ್ಯೂಟಾನ್ ಸಿನಿಮಾ ಆಸ್ಕರ್‍ನಲ್ಲಿ ಟಾಪ್ 5 ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾಗಳ ನಾಮಿನಿಗಳ ಜೊತೆ ಸ್ಪರ್ಧಿಸಲಿದೆ. ಈವರೆಗೆ `ಮದರ್ ಇಂಡಿಯಾ’, `ಸಲಾಂ ಬಾಂಬೆ’ ಮತ್ತು `ಲಗಾನ್’ ಚಿತ್ರಗಳು ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು.

ನ್ಯೂಟನ್ ಸಿನಿಮಾ ಭಾರತ ದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತಂಹ ಒಬ್ಬ ನಿಷ್ಠಾವಂತ ಅಧಿಕಾರಿಯ ಚಿತ್ರವಾಗಿದೆ. ಕಾಡಿನ ಜನರಿಗೆ ಮತ ಹಾಕುವುದರ ಬಗ್ಗೆ ತಿಳಿಸಿ, ಅಲ್ಲಿನ ಪ್ರಭಾವಿ ವ್ಯಕ್ತಿಗಳು ಮಾಡುತ್ತಿರುವ ಮೋಸವನ್ನು ಬಗ್ಗು ಬಡಿದು ನ್ಯಾಯದ ಮೂಲಕ ಮತದಾನ ಮಾಡಿ ಯಶಸ್ವಿಯಾಗುವಂತಹ ಕಥೆಯನ್ನು ಚಿತ್ರ ಹೊಂದಿದೆ.

Comments

Leave a Reply

Your email address will not be published. Required fields are marked *