ಕರಿ`ಕಾಲಾ’ನ ಬೀದಿ ನಾಯಿ `ಮಣಿ’ಗೆ ಕೋಟಿ ಕೋಟಿ ಬೆಲೆ!

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ `ಕಾಲಾ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬೀದಿ ನಾಯಿ `ಮಣಿ’ ಗೆ ಈಗ ಕೋಟಿ ಕೋಟಿ ಬೆಲೆ ಬಂದಿದೆ.

ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ `ಕಾಲಾ’ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಮಣಿ ಹೆಸರಿನ ಬೀದಿ ನಾಯಿ ಸದ್ಯ ಎಲ್ಲಿಲ್ಲದ ಬೇಡಿಕೆ ಪಡೆದುಕೊಂಡಿದೆ. ನಾಯಿಯನ್ನು ಪಡೆಯಲು ಸೂಪರ್ ಸ್ಟಾರ್ ಅಭಿಮಾನಿಗಳು ಪ್ರಯತ್ನಿಸುತ್ತಿದ್ದು, ಕೋಟಿ ಗಟ್ಟಲೇ ಹಣ ನೀಡಿ ಖರೀದಿಸಲು ಮುಂದಾಗಿದ್ದಾರೆ ಎನ್ನುವ ವಿಚಾರ ಕಾಲಿವುಡ್ ಅಂಗಳದಿಂದ ಕೇಳಿ ಬಂದಿದೆ.

ಪ್ರಸ್ತುತ `ಮಣಿ’ ಮಾಲೀಕರಾಗಿರುವ ಪ್ರಾಣಿಗಳ ತರಬೇತುದಾರ ಸೈಮನ್ ಈ ನಾಯಿ ಯನ್ನು ಚೆನ್ನೈನ ಬೀದಿಯಿಂದ ಹಿಡಿದು ತಂದು ತರಬೇತಿಯನ್ನು ನೀಡುತ್ತಿದ್ದರು. ಈ ವೇಳೆ ರಜಿನಿಕಾಂತ್ ಅವರ ಸಿನಿಮಾಗಾಗಿ ನಾಯಿ ಆಯ್ಕೆ ಮಾಡಲು ಆಡಿಷನ್ ನಡೆಸಲಾಗುತಿತ್ತು. ಚಿತ್ರದ ಆಡಿಷನ್ ಗೆ ಬಂದಿದ್ದ 30 ಕ್ಕೂ ಹೆಚ್ಚು ನಾಯಿಗಳನ್ನು ರಜನಿಕಾಂತ್ ನಿರಾಕರಿಸಿದ್ದರು.

ಹಲವು ನಾಯಿಗಳನ್ನು ತೋರಿಸಿದರೂ ಯಾವ ನಾಯಿಯೂ ಆಯ್ಕೆಯಾಗದಿರುವುದು ಕಂಡ ಸೈಮನ್ ಅವರಿಗೆ ರಜನಿ ಅವರ ಜೊತೆ ಸಿನಿಮಾದಲ್ಲಿ ಭಾಗವಹಿಸುವ ಅವಕಾಶ ಕೈ ತಪ್ಪುವ ಭಯ ಉಂಟಾಗಿತ್ತು. ಆದರೆ ಮಣಿಯನ್ನು ಅವರಿಗೆ ತೋರಿಸಿದ ನಂತರ ಅದನ್ನು ಆಯ್ಕೆ ಮಾಡಲಾಯಿತು. ಚಿತ್ರೀಕರಣದ ವೇಳೆ ರಜನಿ ಹಾಗೂ ಮಣಿ ಅವರ ನಡುವೆ ಉತ್ತಮ ಸ್ನೇಹ ಏರ್ಪಟಿದೆ ಎಂದು ಸೈಮನ್ ಹೇಳಿದ್ದಾರೆ.

ಸಿನಿಮಾದಲ್ಲಿ ರಜನಿ ಅವರ ಪಕ್ಕ ಕಾಣಿಸಿಕೊಳ್ಳುವ ನಾಯಿಯಾದ ಕಾರಣ ಇದರ ಆಯ್ಕೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅಲ್ಲದೇ ಚಿತ್ರೀಕರಣದ ಸಮಯದಲ್ಲಿ ಚಿತ್ರ ತಂಡದ ಇತರೇ ನಟರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿತ್ತು. ಈ ಎಲ್ಲಾ ಅಂಶಗಳ ನಡುವೆ ಮಣಿ ನಾಯಿಯನ್ನು ಚಿತ್ರಕ್ಕೆ ಆಯ್ಕೆ ಮಾಡಲಾಯಿತು ಎಂದು ಸೈಮನ್ ವಿವರಿಸಿದ್ದಾರೆ.

ಸೈಮನ್ ಇದುವರೆಗೆ ಸುಮಾರು 1000 ಕ್ಕೂ ಹೆಚ್ಚು ಸಿನಿಮಾಗಳಿಗೆ ಪ್ರಾಣಿಗಳ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ರಜನಿ ಅವರ ಕಾಲಾ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಮಣಿಗೆ ಹೆಚ್ಚಿನ ಬೇಡಿಕೆ ಬಂದಿದ್ದು ಸುಮಾರು 2 ರಿಂದ 3 ಕೋಟಿ ರೂ. ನೀಡುವುದಾಗಿ ಹಲವು ಅಭಿಮಾನಿಗಳು ಮುಂದೆ ಬಂದಿದ್ದಾರೆ. ಆದರೆ ಮಣಿಯನ್ನು ಮಾರಾಟ ಮಾಡುವ ಯಾವುದೇ ಯೋಚನೆಯನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ.

ಅಂದಹಾಗೇ ಮಣಿಗೆ 2.6 ವರ್ಷ ವಯಸ್ಸಾಗಿದ್ದು, ಈಗಾಗಲೇ ತಮಿಳಿನ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಮಣಿಯನ್ನ ಖರೀದಿಸಲು ಭಾರತದಿಂದ ಅಲ್ಲದೇ ಮಲೇಷಿಯಾ ಸೇರಿದಂತೆ ಹಲವು ದೇಶಗಳಿಂದ ಅಭಿಮಾನಿಗಳು ಕರೆ ಮಾಡಿದ್ದಾರೆ ಎಂದು ಸೈಮನ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *