ಚಿಟ್ಟಿ ಕಮ್ ಬ್ಯಾಕ್-ರಜನಿ, ಅಕ್ಷಯ್ ಫೇಸ್ ಟು ಫೇಸ್ 2.0 ಟೀಸರ್ ಔಟ್

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹಾಗು ನಿರ್ದೇಶಕ ಶಂಕರ್ ಜೋಡಿಯ 2.0 ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ನಟ ಅಕ್ಷಯ್ ಕುಮಾರ್ ಜೊತೆಯಾಗಿರುವ ಚಿತ್ರದ ಟೀಸರನ್ನು ಚಿತ್ರತಂಡ ಹಬ್ಬದ ಉಡುಗೊರೆಯಾಗಿ ನೀಡಿದೆ.

2010ರಲ್ಲಿ ಶಂಕರ್ ನಿರ್ದೇಶನದಲ್ಲೇ ಮೂಡಿಬಂದಿದ್ದ ಎಂದಿರನ್ ಚಿತ್ರದ ಮುಂದಿನ ಭಾಗವಾಗಿ 2.0 ಮೂಡಿಬಂದಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ವಿಶೇಷವಾಗಿ ಚಿತ್ರದ ಖಳನಾಯಕನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದು, ಟೀಸರಿನಲ್ಲೇ ಅದರ ಝಲಕ್ ಕಾಣಸಿಗುತ್ತದೆ. ರಜನಿಕಾಂತ್ ಮತ್ತೊಮ್ಮೆ ತಮ್ಮ ಸ್ಟೈಲ್‍ನಲ್ಲಿ ಮಿಂಚಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 2.0 ಚಿತ್ರಕ್ಕೆ ಬರೋಬ್ಬರಿ 543 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಚಿತ್ರ ತಂಡದ ಮೂಲಗಳು ಹೇಳಿಕೊಂಡಿದೆ. ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, 3ಡಿ ರೂಪದಲ್ಲಿ ಸಿನಿಮಾ ಸಿದ್ಧಗೊಂಡಿದೆ.

ಇನ್ನು ಚಿತ್ರದ ಟೀಸರ್ ಬಿಡುಗಡೆ ಕುರಿತು ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ಗಣಪತಿ ಚತುರ್ಥಿಯ ವಿಶೇಷವಾಗಿ ದೇವರು ಹಾಗೂ ದುಷ್ಟ ಶಕ್ತಿಯ ಬಿಗ್ ಫೈಟ್ ನಿಮ್ಮ ಮುಂದಿದೆ ಎಂದು ತಿಳಿಸಿದ್ದಾರೆ. ಒಂದು ನಿಮಿಷವಿರುವ ಟೀಸರಿನಲ್ಲಿ ಆಧುನಿಕ ತಂತ್ರಜ್ಞಾನದ ಸಿಜಿಐ ವರ್ಕ್ ಎಲ್ಲರ ಗಮನ ಸೆಳೆದಿದ್ದು, ಪಕ್ಷಿಗಳ ಹಾರಾಟದಿಂದ ಆರಂಭವಾಗುವ ಮೂಲಕ ಜನರ ಬಳಿ ಇರುವ ಮೊಬೈಲ್ ಫೋನ್ ಹಾರಿಹೋಗುವ ಸನ್ನಿವೇಶ ಒಮ್ಮೆಲೆ ಅಚ್ಚರಿ ಮೂಡಿಸುತ್ತದೆ. ಈ ವೇಳೆ ದೃಷ್ಟ ಶಕ್ತಿಯನ್ನು ಎದುರಿಸಲು ಮತ್ತೆ ಚಿಟ್ಟಿ ಹೆಸರಿನ ರೋಬೋಗೆ ಪುನರ್ ಶಕ್ತಿ ನೀಡಲಾಗುತ್ತದೆ. ಇಲ್ಲಿಗೆ ಅಕ್ಷಯ್ ಕುಮಾರ್ ಹಾಗೂ ರಜನಿ ರೂಪದ ಚಿಟ್ಟಿ ರೋಬೋ ನಡುವಿನ ಹೋರಾಟ ಆರಂಭವಾಗುತ್ತದೆ.

ಚಿತ್ರ ನವೆಂಬರ್ 29ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್‍ರೊಂದಿಗೆ ಅದಿಲ್ ಹುಸೇನ್, ಸುಧಾಂಶು ಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯಾಗಿ ಆ್ಯಮಿ ಜಾಕ್ಸನ್ ನಟಿಸಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಈಗಾಗಲೇ ಅಂತರ್ಜಾಲದಲ್ಲಿ ನಂ.1 ಟ್ರೆಂಡಿಂಗ್‍ನಲ್ಲಿರುವ 2.0 ಸಿನಿಮಾ ಹಿಂದಿ ಟೀಸರ್ 26 ಲಕ್ಷ ವ್ಯೂ, ತಮಿಳು ಟೀಸರ್ 41 ಲಕ್ಷ ವ್ಯೂ, ತೆಲುಗು ಟೀಸರ್ 27 ಲಕ್ಷ ವ್ಯೂ ಕಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *