ಮತ್ತೊಬ್ಬನ ಜೊತೆಗೆ ಮಗಳ ಮದ್ವೆ ಮಾಡಿಸಿದ್ದ ಮಹಿಳೆಯ ಮೂಗು ಕತ್ತರಿಸಿದ್ರು!

ಜೈಪುರ್: ಪತಿಯನ್ನು ಬಿಟ್ಟು ಬಂದಿದ್ದ ಮಗಳಿಗೆ ಬೇರೊಬ್ಬ ವ್ಯಕ್ತಿಯ ಜೊತೆಗೆ ಮದುವೆ ಮಾಡಿಸಿದ್ದಾಳೆ ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳ ಮೂಗು ಕತ್ತರಿಸಿದ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ಶುಕ್ರವಾರ ನಡೆದಿದೆ.

ರಾಜಸ್ಥಾನದ ಬಾಡ್ಮೇರ್ ಜಿಲ್ಲೆಯ ಧುಧು ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಜಗಳದಲ್ಲಿ ಪುರೋದೇವಿ ಎಂಬವರ ಮೂಗು ಕತ್ತರಿಸಲಾಗಿದೆ. ಘಟನೆಯ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪುರೋದೇವಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಏನಿದು ಪ್ರಕರಣ?:
ಗೆನಾನಿಂಯೊಂಕಾ ತಾಲಾ ಗ್ರಾಮದ ಭರೇರಾಮ್ ಹಾಗೂ ಪುರೋದೇವಿ ದಂಪತಿ ತಮ್ಮ ಮಗಳನ್ನು ನಾಲ್ಕು ವರ್ಷದ ಹಿಂದೆ ಲುಖು ಗ್ರಾಮದ ದರೇರಾಮ್ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಡನ ಮನೆ ಸೇರಿದ ಕೆಲವೇ ತಿಂಗಳಿಗೆ ಕೌಟುಂಬಿಕ ಕಲಹವಾಗಿ ಮಗಳು ತವರು ಮನೆಗೆ ಮರಳಿದ್ದಳು. ಹೀಗಾಗಿ ಮೂರು ತಿಂಗಳ ಹಿಂದಷ್ಟೇ ಬುಚಾದ ಗ್ರಾಮದ ವ್ಯಕ್ತಿಯೊಬ್ಬನ ಜೊತೆಗೆ ಮಗಳ ಮದುವೆ ಮಾಡಿಸಿದ್ದಳು.

ಎರಡನೇ ಮದುವೆ ವಿಚಾರ ತಿಳಿಯುತ್ತಿದ್ದಂತೆ ಪುರೋದೇವಿ ಮಗಳ ಮಾಜಿ ಪತಿಯವರು ಗ್ರಾಮಕ್ಕೆ ಬಂದು ಭರೇರಾಮ್ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ತಡೆಲು ಮುಂದಾದ ಪುರೋದೇವಿಗೂ ಥಳಿಸಿ, ಮೂಗು ಕತ್ತರಿಸಿದ್ದಾರೆ. ಎರಡೂ ಕುಟುಂಬಗಳು ಹೊಡೆದಾಡುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪುರೋದೇವಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಹಲ್ಲೆಗೆ ಒಳಗಾದ ಪುರೋದೇವಿ ಹೇಳಿಕೆ ಪಡೆದ ಪೊಲೀಸರು, ಇಬ್ಬರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) ಹಾಗೂ 458 (ಮಾರಣಾಂತಿಕ ಹಲ್ಲೆ) ಅಡಿ ಪ್ರಕರಣ ದಾಖಲಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *